ಯಾದಗಿರಿಯಲ್ಲಿ ಎಸ್‌ಐಆರ್ ಎಣಿಕೆ ನಮೂನೆಗಳ ವಿತರಣೆ ಶೇ.100ರಷ್ಟು ಪೂರ್ಣ
ಬಿಎಲ್‌ಒಗಳಿಗೆ ದಾಖಲೆ ನೀಡಿ ಸಹಕರಿಸುವಂತೆ ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಮನವಿ
ಯಾದಗಿರಿ, ಜು.12: ಜಿಲ್ಲೆಯಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕಾರ್ಯ ಯಶಸ್ವಿಯಾಗಿ ಸಾಗುತ್ತಿದ್ದು, ಮತದಾರರಿಗೆ ಎಣಿಕೆ ನಮೂನೆ (Enumeration Form–EF) ವಿತರಿಸುವ ಕಾರ್ಯವನ್ನು ಶೇ.100ರಷ್ಟು ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಾಹುಲ್ ಪಾಂಡ್ವೆ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜೂನ್ 16, 2026ರ ಅಂತ್ಯದ ವೇಳೆಗೆ ಜಿಲ್ಲೆಯಲ್ಲಿ ಒಟ್ಟು 10,53,236 ಮತದಾರರು ನೋಂದಣಿಯಾಗಿದ್ದು, ಜೂನ್ 30ರಿಂದ ಬಿಎಲ್‌ಒಗಳ ಮೂಲಕ ಮನೆ–ಮನೆಗೆ ತೆರಳಿ ಎಣಿಕೆ ನಮೂನೆಗಳನ್ನು ವಿತರಿಸುವ ಕಾರ್ಯ ಕೈಗೊಳ್ಳಲಾಗಿದೆ. ಈ ಅಭಿಯಾನ ಜುಲೈ 29ರವರೆಗೆ ಮುಂದುವರಿಯಲಿದ್ದು, ಮತದಾರರ ಪಟ್ಟಿಯನ್ನು ನಿಖರ ಹಾಗೂ ದೋಷರಹಿತಗೊಳಿಸುವ ಉದ್ದೇಶದಿಂದ ಪರಿಷ್ಕರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಮುದ್ರಿಸಲಾದ ಎಲ್ಲಾ 10,53,236 ಎಣಿಕೆ ನಮೂನೆಗಳು (ಶೇ.100) ಮತದಾರರಿಗೆ ಯಶಸ್ವಿಯಾಗಿ ವಿತರಿಸಲಾಗಿದೆ. ಇದುವರೆಗೆ 1,86,796 (ಶೇ.17.74) ನಮೂನೆಗಳನ್ನು ಡಿಜಿಟಲೀಕರಣಗೊಳಿಸಲಾಗಿದ್ದು, 1,645 (ಶೇ.0.16) ಅರ್ಜಿಗಳು ಆನ್‌ಲೈನ್ ಮೂಲಕ ಸ್ವೀಕರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪರಿಶೀಲನಾ ಪ್ರಕ್ರಿಯೆಯಲ್ಲಿ ಒಟ್ಟು 2,598 ಮತದಾರರನ್ನು ವಿವಿಧ ಕಾರಣಗಳಿಂದ ಗುರುತಿಸಲಾಗಿದ್ದು, ಇವರಲ್ಲಿ 1,213 ಮಂದಿ ಮೃತಪಟ್ಟವರು, 875 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು, 440 ಮಂದಿ ಬೇರೆಡೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡವರು, 53 ಮಂದಿ ಗೈರುಹಾಜರಾಗಿರುವವರು ಹಾಗೂ 17 ಪ್ರಕರಣಗಳು ಇತರೆ ಕಾರಣಗಳಿಗೆ ಸಂಬಂಧಿಸಿದವು ಎಂದು ತಿಳಿಸಿದ್ದಾರೆ.
ತಾಲ್ಲೂಕುವಾರು ಪ್ರಗತಿಯಲ್ಲಿ ಶೋರಾಪುರ, ಶಹಾಪುರ, ಯಾದಗಿರಿ, ಗುರುಮಿಠಕಲ್, ವಡಗೇರಾ ಹಾಗೂ ಹುನಸಗಿ ತಾಲ್ಲೂಕುಗಳಲ್ಲಿ ಎಣಿಕೆ ನಮೂನೆಗಳ ವಿತರಣೆ ಶೇ.100ರಷ್ಟು ಪೂರ್ಣಗೊಂಡಿದೆ. ಡಿಜಿಟಲೀಕರಣದಲ್ಲಿ ಶಹಾಪುರ ತಾಲ್ಲೂಕು ಶೇ.24.17ರೊಂದಿಗೆ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಗತಿ ಸಾಧಿಸಿದ್ದು, ಹುನಸಗಿ (ಶೇ.20.93), ಗುರುಮಿಠಕಲ್ (ಶೇ.20.76), ಶೋರಾಪುರ (ಶೇ.14.78), ವಡಗೇರಾ (ಶೇ.13.53) ಹಾಗೂ ಯಾದಗಿರಿ (ಶೇ.12.14) ತಾಲ್ಲೂಕುಗಳು ನಂತರದ ಸ್ಥಾನದಲ್ಲಿವೆ.
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಯಶಸ್ವಿಗೊಳಿಸಲು ಸಾರ್ವಜನಿಕರು ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿಎಲ್‌ಒ) ಅಗತ್ಯ ದಾಖಲೆಗಳು ಹಾಗೂ ಮಾಹಿತಿಯನ್ನು ಒದಗಿಸಿ ಸಹಕರಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಾಹುಲ್ ಪಾಂಡ್ವೆ ಮನವಿ ಮಾಡಿದ್ದಾರೆ.