Yadgiri | ಕಳ್ಳತನ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸಿ: ಉಮೇಶ್ ಮುದ್ನಾಳ ಆಗ್ರಹ
ಮನೆ, ಬೈಕ್ ಹಾಗೂ ಜಾನುವಾರು ಕಳ್ಳತನ ಹೆಚ್ಚಳ ಹಿನ್ನೆಲೆ ಎಸ್‌ಪಿಗೆ ಮನವಿ
ಯಾದಗಿರಿ : ಜಿಲ್ಲೆಯಾದ್ಯಂತ ಮನೆಗಳು, ದ್ವಿಚಕ್ರ ವಾಹನಗಳು, ದನ-ಕರುಗಳು ಹಾಗೂ ಕುರಿಗಳ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಬೀಗ ಹಾಕಿದ ಮನೆಗಳು, ಬೈಕ್‌ಗಳು, ದನ-ಕರುಗಳು ಹಾಗೂ ಕುರಿಗಳ ಕಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಜಾನುವಾರುಗಳ ಬೆಲೆ ಹೆಚ್ಚಿರುವ ಕಾರಣ ಅವುಗಳನ್ನು ಕಳವು ಮಾಡಿ ಮಾರಾಟ ಮಾಡುವ ಸಂಘಟಿತ ಜಾಲ ಕಾರ್ಯನಿರ್ವಹಿಸುತ್ತಿರುವ ಶಂಕೆಯಿದ್ದು, ರೈತರು ಹಾಗೂ ಸಾರ್ವಜನಿಕರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಕಳ್ಳತನ ಪ್ರಕರಣಗಳನ್ನು ಭೇದಿಸಲು ಅನುಭವಿ ಹಾಗೂ ನುರಿತ ಅಧಿಕಾರಿಗಳನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿ, ಸಂಘಟಿತ ಕಳ್ಳರ ಜಾಲವನ್ನು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇದರಿಂದ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವುದರ ಜೊತೆಗೆ ಕಳ್ಳತನ ಪ್ರಕರಣಗಳಿಗೆ ಶಾಶ್ವತವಾಗಿ ಕಡಿವಾಣ ಹಾಕಲು ಸಾಧ್ಯವಾಗಲಿದೆ ಎಂದು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಬಳಿಚಕ್ರ ಗ್ರಾಮದಲ್ಲಿ ಮಧ್ಯರಾತ್ರಿ ಬೈಕ್ ಕಳ್ಳತನಕ್ಕೆ ಬಂದಿದ್ದ ಒಬ್ಬ ಆರೋಪಿಯನ್ನು ಗ್ರಾಮಸ್ಥರು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆಯನ್ನು ಉಲ್ಲೇಖಿಸಿರುವ ಅವರು, ಜೀವದ ಹಂಗು ತೊರೆದು ಕಳ್ಳನನ್ನು ಸೆರೆಹಿಡಿದ ಗ್ರಾಮಸ್ಥರ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದ್ದಾರೆ. ಆದರೆ, ಇತರ ಆರೋಪಿಗಳು ಪರಾರಿಯಾಗಿರುವ ಹಿನ್ನೆಲೆಯಲ್ಲಿ ಈ ಕೃತ್ಯದ ಹಿಂದಿರುವ ಸಂಘಟಿತ ಜಾಲವನ್ನು ಪತ್ತೆಹಚ್ಚಲು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆಯ ಕೆಳಮಟ್ಟದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡುವಂತೆ ಹಾಗೂ ಅಗತ್ಯ ಸುತ್ತೋಲೆ ಹೊರಡಿಸುವಂತೆ ಮನವಿ ಮಾಡಿದ್ದಾರೆ.
ಈ ಮನವಿಯ ಪ್ರತಿಯನ್ನು ರಾಜ್ಯ ಗೃಹ ಸಚಿವರು, ಕಲಬುರಗಿ ಪ್ರಾದೇಶಿಕ ಆಯುಕ್ತರು ಹಾಗೂ ಯಾದಗಿರಿ ಜಿಲ್ಲಾಧಿಕಾರಿಗಳಿಗೆ ಮಾಹಿತಿಗಾಗಿ ಮತ್ತು ಅಗತ್ಯ ಕ್ರಮಕ್ಕಾಗಿ ಸಲ್ಲಿಸಲಾಗಿದೆ.
ಈ ಸಂದರ್ಭದಲ್ಲಿ ವೀರಭದ್ರಪ್ಪ, ಪರಸಪ್ಪ, ಈರಪ್ಪಗೌಡ, ಮಲ್ಲಿಕಾರ್ಜುನ, ಸಾಯಿಬಣ್ಣ, ಗನ್ ಶಾಮ್, ಆಕಾಶ, ಅಕ್ರಮ, ನಯಿಮ್, ಅಜೀಜ್, ವೆಂಕಟೇಶ, ಅಯ್ಯಣ್ಣ, ಬನ್ನಪ್ಪ ಶರಣಪ್ಪ, ಗಣೇಶ್, ಸಲಿಂ, ಮಹೇಶ್, ವಿನೋದ, ಮೌನೇಶ, ಅಜಯ, ಕುಮಾರ್, ಆಕಾಶ, ಸೇರಿದಂತೆ ಅನೇಕರು ಇದ್ದರು.