ಸುರಪುರ | ಎಸ್‌ಐಆರ್‌ಗೆ ದಾಖಲೆ ಕೇಳಿದಂತೆ ಸರಕಾರ ಆರೆಸ್ಸೆಸ್‌ನ ದಾಖಲೆಯನ್ನೂ ಕೇಳಲಿ : ಕ್ರಾಂತಿ
ಸುರಪುರ : ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಮತದಾರರಿಂದ ದಾಖಲೆಗಳನ್ನು ಕೇಳುತ್ತಿರುವ ಸರ್ಕಾರ, ದೇಶದಲ್ಲಿ ನೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ ಎನ್ನುವ ಆರೆಸ್ಸೆಸ್‌ನ ದಾಖಲೆಯನ್ನೂ ಕೇಳಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಆಗ್ರಹಿಸಿದರು.
ಶನಿವಾರ ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಐಆರ್ ಅರ್ಜಿ ನಮೂನೆಯ ಮೊದಲ ಹಾಗೂ ಎರಡನೇ ಭಾಗಗಳನ್ನು ನೋಡಿದರೆ ವಿದ್ಯಾವಂತರಿಗೂ ಅದನ್ನು ಭರ್ತಿ ಮಾಡುವುದು ಕಷ್ಟಕರವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಮತದಾರರು ಅವಿದ್ಯಾವಂತರಾಗಿರುವುದರಿಂದ ಸ್ವತಃ ಅರ್ಜಿ ಭರ್ತಿ ಮಾಡುವುದು ಇನ್ನಷ್ಟು ಕಷ್ಟವಾಗಲಿದೆ ಎಂದು ಹೇಳಿದರು.
ಆದ್ದರಿಂದ ಚುನಾವಣಾ ಆಯೋಗವು ಬಿಎಲ್‌ಒಗಳ ಮೂಲಕವೇ ಎಸ್‌ಐಆರ್ ಅರ್ಜಿಗಳನ್ನು ಭರ್ತಿ ಮಾಡುವ ವ್ಯವಸ್ಥೆ ಕಲ್ಪಿಸಬೇಕು. ಅಗತ್ಯವಿದ್ದರೆ ಈ ಕಾರ್ಯಕ್ಕಾಗಿಯೇ ಹೆಚ್ಚುವರಿ ಅಧಿಕಾರಿಗಳನ್ನು ನೇಮಕ ಮಾಡಿ ಮತದಾರರಿಗೆ ನೆರವು ನೀಡಬೇಕು ಎಂದು ಒತ್ತಾಯಿಸಿದರು.
ಇಲ್ಲವಾದಲ್ಲಿ ಪಶ್ಚಿಮ ಬಂಗಾಳದಲ್ಲಿ ಲಕ್ಷಾಂತರ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿದಂತೆ, ಕರ್ನಾಟಕದಲ್ಲಿಯೂ ಶೇ.75ರಷ್ಟು ಮತದಾರರು ಮುಂದಿನ ದಿನಗಳಲ್ಲಿ ಮತದಾನದ ಹಕ್ಕಿನಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
2002ರ ಮತದಾರರ ಪಟ್ಟಿಗೆ ಸಂಬಂಧಿಸಿದ ದಾಖಲೆಗಳನ್ನು ಮತದಾರರಿಂದ ಕೇಳುತ್ತಿರುವ ಕೇಂದ್ರ ಸರ್ಕಾರ, ದೇಶದಲ್ಲಿ ನೂರು ವರ್ಷಗಳಿಂದ ಚಟುವಟಿಕೆ ನಡೆಸುತ್ತಿರುವ ಆರೆಸ್ಸೆಸ್‌ನ ದಾಖಲೆಯನ್ನೂ ಪರಿಶೀಲಿಸಿ, ಅಗತ್ಯ ನೋಂದಣಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ತಾಲೂಕು ಸಂಚಾಲಕ ಬಸವರಾಜ ದೊಡ್ಡಮನಿ, ವಡಿಗೇರ ತಾಲೂಕ ಸಂಚಾಲಕ ಬಸವರಾಜ ಗೋನಾಲ, ಮುಖಂಡರಾದ ಚಂದ್ರಶೇಖರ ಕಟ್ಟಿಮನಿ,ಸಿದ್ದಪ್ಪ ಸುರಪುರಕರ್, ಮೂರ್ತಿ ಬೊಮ್ಮನಹಳ್ಳಿ, ಖಾಜಾ ಹುಸೇನ್ ಗುಡಗುಂಟಿ, ಮರೆಪ್ಪ ಕಾಂಗ್ರೆಸ್, ಮಹೇಶ ಕುಮಾರ ಸುಂಗಲಕರ್, ಹುಲಗಪ್ಪ ಶೆಳ್ಳಗಿ ಉಪಸ್ಥಿತರಿದ್ದರು.