Yadgiri | ಲಿಂಗತ್ವ ದೃಢೀಕರಣ ಪರೀಕ್ಷೆ ನಮಗೇಕೆ? : ಅಕ್ಕೈ ಪದ್ಮಶಾಲಿ ಪ್ರಶ್ನೆ
‘ಭಯ ಬಿಡಿ–ಪ್ರೀತಿ ಮಾಡಿ’ ಸಂವಾದದಲ್ಲಿ ಸಮಾನ ಹಕ್ಕು, ಗೌರವಯುತ ಬದುಕಿಗೆ ಒತ್ತಾಯ
ಯಾದಗಿರಿ : “ಲಿಂಗತ್ವ ಅಲ್ಪಸಂಖ್ಯಾತರಿಗಷ್ಟೇ ವೈದ್ಯಕೀಯ ಪರೀಕ್ಷೆ ನಡೆಸಿ ಲಿಂಗತ್ವವನ್ನು ದೃಢೀಕರಿಸುವ ವ್ಯವಸ್ಥೆ ಏಕೆ? ಉಳಿದವರಿಗೆ ಇಲ್ಲದ ನಿಯಮ ನಮಗೇಕೆ?” ಎಂದು ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಹಾಗೂ ಸುಪ್ರೀಂ ಕೋರ್ಟ್ ಸಲಹಾ ಸಮಿತಿಯ ಸದಸ್ಯೆ ಅಕ್ಕೈ ಪದ್ಮಶಾಲಿ ಪ್ರಶ್ನಿಸಿದರು.
ಜಿಲ್ಲಾ ಪೊಲೀಸ್ ಇಲಾಖೆ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ‘ಭಯ ಬಿಡಿ–ಪ್ರೀತಿ ಮಾಡಿ’ ಅಭಿಯಾನದಡಿ ಆಯೋಜಿಸಿದ್ದ ಲಿಂಗತ್ವ ಅಲ್ಪಸಂಖ್ಯಾತರು ಮತ್ತು ಪೊಲೀಸ್ ಅಧಿಕಾರಿಗಳ ಸಂವಾದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಶೋಷಣೆ, ಅಪಮಾನ, ನಿರುದ್ಯೋಗ, ಬಡತನ ಹಾಗೂ ಕುಟುಂಬದ ನಿರ್ಲಕ್ಷ್ಯದಿಂದ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯ ಹಲವು ಅವಕಾಶಗಳಿಂದ ವಂಚಿತವಾಗಿದೆ. ಸರ್ಕಾರ ಈ ಸಮುದಾಯಕ್ಕೆ ಅಗತ್ಯ ಮೂಲಸೌಕರ್ಯ ಹಾಗೂ ಗೌರವಯುತ ಬದುಕಿನ ಅವಕಾಶಗಳನ್ನು ಕಲ್ಪಿಸಬೇಕು. ನಮ್ಮನ್ನೂ ಎಲ್ಲರಂತೆ ಸಮಾನವಾಗಿ ಕಾಣಬೇಕು ಎಂದು ಆಗ್ರಹಿಸಿದರು.
ಕಳೆದ ಮೂರು ದಶಕಗಳಿಂದ ಸಮುದಾಯದ ಹಕ್ಕುಗಳಿಗಾಗಿ ಹೋರಾಟ ನಡೆಯುತ್ತಿದ್ದರೂ ಸಮಾಜದ ಮುಖ್ಯವಾಹಿನಿಯಲ್ಲಿ ಸಮಾನ ಸ್ಥಾನಮಾನ ಪಡೆಯಲು ಇನ್ನೂ ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಆಶಾಕಿರಣ ಸಾಮಾಜಿಕ ಸೇವಾ ಸಂಸ್ಥೆಯ ಅಧ್ಯಕ್ಷೆ ಮಾಯಾ ಎಸ್.ಆರ್. ನಾಯಕ ಹಾಗೂ ರಾಯಚೂರಿನ ಮಾಳವಿಕಾ ಮಾತನಾಡಿ, ಲಿಂಗತ್ವ ಅಲ್ಪಸಂಖ್ಯಾತರು ಸಮಾಜದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು, ಅವರ ಆಶೋತ್ತರಗಳು ಹಾಗೂ ಸಾಮಾಜಿಕ ಸ್ವೀಕಾರದ ಅಗತ್ಯತೆಯ ಬಗ್ಗೆ ವಿವರಿಸಿದರು.
ಸಂವಾದದಲ್ಲಿ ಭಾಗವಹಿಸಿದ್ದ ಪೊಲೀಸ್ ಅಧಿಕಾರಿಗಳು, ಕೆಲ ಲಿಂಗತ್ವ ಅಲ್ಪಸಂಖ್ಯಾತರಿಂದ ಸಾರ್ವಜನಿಕರಿಗೆ ಕಿರುಕುಳ, ಭಿಕ್ಷಾಟನೆ ಹಾಗೂ ಹೆದ್ದಾರಿಗಳಲ್ಲಿ ವಾಹನ ಸವಾರರಿಂದ ಬಲವಂತವಾಗಿ ಹಣ ವಸೂಲಿ ಮಾಡುವ ಪ್ರಕರಣಗಳನ್ನು ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಕ್ಕೈ ಪದ್ಮಶಾಲಿ, ಮಾಯಾ ಎಸ್.ಆರ್. ನಾಯಕ ಹಾಗೂ ಮಾಳವಿಕಾ, “ತಪ್ಪು ಮಾಡಿದವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಸಮುದಾಯದ ಹೆಸರಿನಲ್ಲಿ ಯಾವುದೇ ತಪ್ಪನ್ನು ಸಮರ್ಥಿಸಲು ಸಾಧ್ಯವಿಲ್ಲ” ಎಂದು ಸ್ಪಷ್ಟಪಡಿಸಿದರು.
ಈ ವೇಳೆ ಪೊಲೀಸ್ ಅಧಿಕಾರಿ ಪಂಡಿತ್ ಪ್ರಸ್ತಾಪಿಸಿದ ಬಾಲಕರ ಅಪಹರಣ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅಕ್ಕೈ ಪದ್ಮಶಾಲಿ, ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಮಾತನಾಡಿ, ಯಾರೂ ಸುಮ್ಮನೆ ಇಂತಹ ಬದುಕನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ. ಶಿಕ್ಷಣ, ಉದ್ಯೋಗ ಹಾಗೂ ಗೌರವಯುತ ಬದುಕಿನ ಅವಕಾಶಗಳು ದೊರೆತರೆ ಇಂತಹ ಪರಿಸ್ಥಿತಿಗಳು ಕಡಿಮೆಯಾಗುತ್ತವೆ. ಆ ನಿಟ್ಟಿನಲ್ಲಿ ಸಮಾಜ ಮತ್ತು ಸರ್ಕಾರ ಸಮನ್ವಯದಿಂದ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಹೆಚ್ಚುವರಿ ಎಸ್‌ಪಿ ಧರಣೇಶ್, ಅಮೀದಾಬೇಗಂ, ಪ್ರಿಯಾಂಕಾ, ಡಿವೈಎಸ್‌ಪಿಗಳಾದ ಭರತಕುಮಾರ ತಳವಾರ, ಜಾವಿದ್ ಇನಾಂದಾರ್, ಸುರೇಶ್ ನಾಯಕ ಸೇರಿದಂತೆ ವಿವಿಧ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.