ಯಾದಗಿರಿಯಲ್ಲಿ ʼಮನೆ - ಮನೆಗೂ ಪೊಲೀಸ್ʼ ಕಾರ್ಯಕ್ರಮ
ಯಾದಗಿರಿ: ಯಾವುದೇ ಅಪರಾಧಗಳು ನಡೆಯಬಾರದು. ಇವುಗಳಿಂದ ಜಾಗೃತರಾಗಿರಲು ʼಮನೆ, ಮನೆಗೂ ಪೊಲೀಸ್ʼ ಎಂಬ ಹೆಸರಿನಡಿ ತಂಡ ರಚಿಸಿ ಎಲ್ಲ ಬಡಾವಣೆಗಳ ಪ್ರತಿ ಮನೆಗಳಿಗೂ ಹೋಗಿ ಅಲ್ಲಿ ಜನಕ್ಕೆ ಅರಿವು ಮೂಡಿಸುವ ಉದ್ದೇಶ ಇದಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಹೇಳಿದರು.
ಕಳೆದ ತಿಂಗಳು ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆ ಜಾರಿಗೊಳಿಸಿರುವ 'ಮನೆ, ಮನೆಗೂ ಪೊಲೀಸ್' ಎಂಬ ಹೆಸರಿನಡಿಯ ಈ ಕಾರ್ಯಕ್ರಮದಂಗವಾಗಿ ಶನಿವಾರ ತಂಡದೊಂದಿಗೆ ಲಕ್ಷ್ಮಿ ನಗರ, ಡಾ. ಅಂಬೇಡ್ಕರ್ ನಗರ ಮತ್ತು ಮಾತಾ ಮಾಣಿಕೇಶ್ವರಿ ಕಾಲೋನಿಗಳ ಅನೇಕ ಮನೆಗಳಿಗೇ ಭೇಟಿ ನೀಡಿದ ವೇಳೆ ಅವರು ಮಾತನಾಡಿದರು.
ಈಗಾಗಲೇ ಹಳ್ಳಿಗಳಲ್ಲಿ ಬೀಟ್ ಹೆಸರಿನಿಂದ ಇಂತಹ ಕೆಲಸ ಅನೇಕ ವರ್ಷಗಳಿಂದ ಚಾಲ್ತಿಯಲ್ಲಿದೆ. ಕಳ್ಳತನ, ಗುಂಪು ಜಗಳ ಸೇರಿದಂತೆಯೇ ಯಾವುದೇ ಅಪರಾಧಗಳು ನಡೆಯಬಾರದು. ಮನೆ, ಬಡಾವಣೆಗಳಲ್ಲಿ ಜನರ ಸುರಕ್ಷಿತವಾಗಿ ಹೇಗೆ ಇರಬೇಕು. ಏನಾದರೂ ಘಟನೆ ಸಂಭವಿಸಿದಾಗ ಯಾರಿಗೆ, ಯಾವ ನಂ.ಗೆ ಸಂಪರ್ಕಿಸಬೇಕು ಹಾಗೂ ಮನೆಗಳಲ್ಲಿ ವಾಸ ಮಾಡುವವರ ಸಂಖ್ಯೆ ಹೀಗೆ ಎಲ್ಲವೂ ಈ ನಮ್ಮ ತಂಡ ಮಾಡುವ ಮೂಲಕ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿ ಮಾಡುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ ಎಂದರು.
ಬಡಾವಣೆಗಳಲ್ಲಿ ಎಲ್ಲರೂ ಒಂದಾಗಿ ಇರಬೇಕು. ಹಗಲು, ರಾತ್ರಿ ಎನ್ನದೇ ಜನರ ಸುರಕ್ಷತೆಗೆ ಪೊಲೀಸ್ ಜೊತೆ ಸಹಕರಿಸುವ ಮೂಲಕ ಅಪರಾಧಗಳನ್ನು ತಡೆಯಬೇಕೆಂದು ಎಸ್ ಪಿ ಹೇಳಿದರು.
ಡಾ. ಅಂಬೇಡ್ಕರ್ ನಗರದ ದಲಿತ ಮುಖಂಡರಾದ ಸಾಬಣ್ಣ ಸುಂಗಲಕರ್ ಅವರ ಮನೆಯಲ್ಲಿ ಈ ಬಗ್ಗೆ ಜನರಿಗೆ ತಿಳಿಸುವ ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹೆಚ್ಚುವರಿ ಎಸ್ ಪಿ ಧರಣೇಶ ಸೂಕ್ತ ಸಲಹೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ನಗರದ ಎಲ್ಲ ದಲಿತ ಮುಖಂಡರು ಇದ್ದರು.