ಯಾದಗಿರಿ | ಭೀಮಾನದಿ ತೀರದ ಬೆಳೆ ಹಾನಿ ಪ್ರದೇಶಕ್ಕೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಭೇಟಿ
ಯಾದಗಿರಿ: ನಮ್ಮ ಸರ್ಕಾರ ಸದಾ ರೈತರ ಕಾಳಜಿ ಹೊಂದಿದ್ದು, ಆದಷ್ಟು ಬೇಗ ಸೂಕ್ತ ಹಾಗೂ ಹೆಚ್ಚಿನ ಪರಿಹಾರವನ್ನು ನೀಡಲಾಗುವುದು ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಭರವಸೆ ನೀಡಿದರು.
ಮಂಗಳವಾರ ಅವರು ವಡಗೇರಾ ತಾಲೂಕಿನ ಜೋಳದಡಗಿ ಮತ್ತು ಶಿವನೂರು ಗ್ರಾಮಗಳ ಪ್ರವಾಹ ಪೀಡಿತ ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೊದಲಿಗೆ ಜೋಳದಡಗಿ ಬ್ರಿಡ್ಜ್ ಕಮ್ ಬ್ಯಾರೇಜ್ ಬಳಿ ರೈತರ ದುರಂತ ವೀಕ್ಷಿಸಿ, ಬೆಳೆ ಹಾನಿಯನ್ನು ಪರಿಶೀಲಿಸಿದರು. ಈ ವೇಳೆ ರೈತ ದೇವೇಂದ್ರಪ್ಪ ಪೂಜಾರಿ, “ಪ್ರತಿ ವರ್ಷ ಪ್ರವಾಹದಿಂದ ಭತ್ತದ ಬೆಳೆ ನೀರಾಗುತ್ತಿದೆ. ಈ ಬಾರಿ ನನ್ನ 4 ಎಕರೆ ಭತ್ತ ಹಾನಿಯಾಗಿದೆ ಎಂದು ನೋವು ತೋಡಿಕೊಂಡರು. ಅದೇ ರೀತಿ ರೈತ ಮಹಿಳೆ ಲಕ್ಷ್ಮಿ ಭೀಮಾನದಿ ಕೂಡ ತಮ್ಮ ಸಂಕಷ್ಟ ಹಂಚಿಕೊಂಡರು.
ನಂತರ ಶಿವನೂರು ಗ್ರಾಮಕ್ಕೆ ಭೇಟಿ ನೀಡಿದ ಶಾಸಕ, ಭತ್ತ ಮತ್ತು ಹತ್ತಿ ಬೆಳೆ ಹಾನಿಯನ್ನು ಪರಿಶೀಲಿಸಿ, ಭೀಮಾ ನದಿಯಿಂದ ಉಂಟಾದ ಪ್ರವಾಹ ಪರಿಸ್ಥಿತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ವೇಳೆ ರೈತ ಹಂಪಯ್ಯ, “ಕಳೆದ ವರ್ಷ ಪರಿಹಾರ ಕಡಿಮೆ ನೀಡಲಾಗಿತ್ತು. ಈ ಬಾರಿ ಹೆಚ್ಚಿನ ಪರಿಹಾರ ನೀಡಬೇಕು” ಎಂದು ಮನವಿ ಮಾಡಿದರು.
ಈ ವೇಳೆ ಪ್ರತಿಕ್ರಿಯಿಸಿದ ಶಾಸಕರು, “ನಾವು ನಿಮ್ಮ ಸಮಸ್ಯೆ ಕೇಳಲು ಬಂದಿದ್ದೇವೆ. ಯಾವುದೇ ರೈತರ ಜಮೀನು ಸಮೀಕ್ಷೆಯಿಂದ ಹೊರ ಹೋಗಬಾರದು. ಕಂದಾಯ ಮತ್ತು ಕೃಷಿ ಇಲಾಖೆ ಜಂಟಿಯಾಗಿ ನಿಖರ ಸಮೀಕ್ಷೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಭೀಮಾ ನದಿಗೆ 3.5 ಲಕ್ಷ ಕ್ಯೂಸೆಕ್ ನೀರು ಬಿಟ್ಟ ಪರಿಣಾಮ 22 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಬೆಳೆ ಹಾನಿಯಾಗಿದೆ. ಈಗಾಗಲೇ ಸಮೀಕ್ಷೆ ಮಾಡಲು ಸೂಚಿಸಲಾಗಿದೆ. ರೈತರು ಯಾವುದೇ ಆತಂಕ ಪಡಬೇಡಿ, ಸರ್ಕಾರದಿಂದ ಸೂಕ್ತ ಪರಿಹಾರ ಕಲ್ಪಿಸಲಾಗುವುದು. ಅಗತ್ಯವಿದ್ದಲ್ಲಿ ಶಿವನೂರು ಗ್ರಾಮಸ್ಥರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗುವುದು. ಮುಂದಿನ ದಿನಗಳಲ್ಲಿ ಈ ಗ್ರಾಮವನ್ನು ಶಾಶ್ವತವಾಗಿ ಸ್ಥಳಾಂತರಿಸಲು ಪ್ರಯತ್ನ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ವಡಗೇರಾ ತಹಶೀಲ್ದಾರ್ ಮಂಗಳಾ, ತಾಪಂ ಇಓ ಮಲ್ಲಿಕಾರ್ಜುನ ಸಂಗ್ವಾರ, ಡಿವೈಎಸ್ಪಿ ಸುರೇಶ್, ಪಶುಸಂಗೋಪನಾ ಇಲಾಖೆ ಡಿಡಿ ರಾಜು ದೇಶಮುಖ, ವೆಂಕಟರೆಡ್ಡಿ ಪಾಟೀಲ, ಶಂಕರಗೌಡ ಪಾಟೀಲ, ಬಾಪುಗೌಡ ಮಾಚನೂರು, ಸಿದ್ದಪ್ಪಗೌಡ ಸೋಮಯ್ಯ ಸ್ವಾಮಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.