ಯಾದಗಿರಿ: ಸರ್ಕಾರಿ ಶಾಲೆಗೆ ಅಝೀಂ ಪ್ರೇಮ್ ಜಿ ಫೌಂಡೇಶನ್ ಮುಖ್ಯಸ್ಥರ ಭೇಟಿ
ಯಾದಗಿರಿ: ಸುರಪುರ ತಾಲೂಕಿನ ದೇವರಗೋನಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಅಝೀಂ ಪ್ರೇಮ್ ಜಿ ಫೌಂಡೇಶನ್ ನ ಸಂಜೀವ ಕುಲಕರ್ಣಿ ಮತ್ತು ಅವರ ತಂಡ ಭೇಟಿ ನೀಡಿ ಮಕ್ಕಳ ಸಂವಾದ ಕಾರ್ಯಕ್ರಮದಲ್ಲಿ ವಿಶೇಷ ಚೇತನ ಮಕ್ಕಳ ಕಲಿಕಾ ಗುಣಮಟ್ಟವನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ ಸಂಜೀವ ಕುಲಕರ್ಣಿ, ಪ್ರತಿಯೊಂದು ಮಗುವಿನ ಉತ್ತಮವಾದ ವಿದ್ಯಾಭ್ಯಾಸಕ್ಕಾಗಿ ಫೌಂಡೇಶನ್ ಗಮನಹರಿಸುತ್ತದೆ ಹಾಗೂ ಫೌಂಡೇಶನ್ ನಿಂದ ನೀಡುವ ಸೌಲಭ್ಯಗಳು ಸರಿಯಾಗಿ ಮಕ್ಕಳು ಸದ್ಬಳಕೆ ಮಾಡಿಕೊಳ್ಳಬೇಕು. ವಿಶೇಷ ಚೇತನ ಮಕ್ಕಳು ಕೂಡ ಸಾಮಾನ್ಯ ಮಕ್ಕಳಂತೆ ಶಿಕ್ಷಣದಲ್ಲಿ ಸಾಧನೆ ಮಾಡಬಹುದು, ಚೆನ್ನಾಗಿ ಓದುವ ಮೂಲಕ ನಿಮ್ಮ ಪೋಷಕರ ಹೆಸರನ್ನು ಕೂಡ ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಕಿವಿಮಾತು ಹೇಳಿದರು. ಹಾಗೂ ಶಾಲೆಯಲ್ಲಿನ ಎಲ್ಲಾ ಶಿಕ್ಷಕರನ್ನು ಉದ್ದೇಶಿಸಿ ಎಲ್ಲಾ ಮಕ್ಕಳ ಉತ್ತಮ ಕಲಿಕೆಗಾಗಿ ತಾವುಗಳು ಕೂಡ ನಿರಂತರವಾಗಿ ಶ್ರಮಿಸುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬಿಐಈಆರ್‌ಟಿ ಮಹಾದೇವಪ್ಪ ಗುತ್ತೇದಾರ್, ಎಪಿಡಿ ಸಂಸ್ಥೆಯ ನಿರ್ದೇಶಕ ರಮೇಶ್ ದುಂಡಪ್ಪ, ಪ್ರಾಜೆಕ್ಟ್ ಮ್ಯಾನೇಜರ್ ಸಂಪರೀತಾ, ರಮೇಶ ಮನೆ ನಾಗಪ್ಪ ಅವಂಟಿ ಗಿರೀಶ್ ಕುಲಕರ್ಣಿ, ಸೌಮ್ಯ, ನಾರಾಯಣಮ್ಮ ತಂಡದಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ಶಾಲೆಯ ಮುಖ್ಯೋಪಾದ್ಯಯರು ಸೇರಿದಂತೆ ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.