×
Ad

ದಸರಾ ಉದ್ಘಾಟನೆಗೆ ಆಹ್ವಾನಿಸಿದ್ದು ಬಾನು ಮುಷ್ತಾಕ್ ಅವರನ್ನೇ ಹೊರತು ʼಒಸಮಾ ಬಿನ್ ಲಾಡೆನ್ ಗಲ್ಲʼ : ಸಚಿವ ದರ್ಶನಾಪುರ

Update: 2025-08-26 22:08 IST

ಯಾದಗಿರಿ: ದಸರಾ ಉದ್ಘಾಟನೆ ಆಹ್ವಾನಿಸಿದ್ದು ಬೂಕರ್ ಪ್ರಶಸ್ತಿ ಪುರಸ್ಕ್ರತ ಬಾನು ಮುಷ್ತಾಕ್ ಅವರನ್ನೇ ಹೊರತು "ಒಸಮಾಬಿನ್ ಲಾಡೆನ್ ಗಲ್ಲ" ಎಂದಿರುವ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಬಿಜೆಪಿಯವರಿಗೆ ಮೊಸರಲ್ಲಿ ಕಲ್ಲು ಹುಡುಕುವುದೇ ಕೆಲಸವೆಂದು ಟಾಂಗ್ ನೀಡಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಡಿನ‌ ಹೆಸರಾಂತ ಸಾಹಿತಿ, ಸಾಮಾಜಿಕ‌ ಹೋರಾಟಗಾರ್ತಿಯೂ ಆಗಿರುವ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿದರಲ್ಲಿ‌ ಏನು ತಪ್ಪಿಲ್ಲ ಎಂದರು.

ಸ್ವತಃ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಏನು ಸಮಸ್ಯೆ ಇಲ್ಲ ಎಂದು‌ ಸ್ಪಷ್ಟಪಡಿಸಿರಬೇಕಾದರೆ ಈ‌ ಬಿಜೆಪಿಯವರಿಗೆ ಏನು‌ ತೊಂದರೆ ಎಂದು ಪ್ರಶ್ನಿಸಿದರು.

ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಆರೆಸ್ಸೆಸ್ ಗೀತೆ ಹಾಡಿದ್ದರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅವರೇನು ಬೇಕು ಅಂತ ಹಾಡಿದ್ದಲ್ಲ. ಅಧಿವೇಶನದಲ್ಲಿ ಬಿಜೆಪಿಯ ಅಶ್ವಥನಾರಾಯಣ ಅವರಿಗೆ ಈ ಬಗ್ಗೆ ಹೇಳುವಾಗ ಅಚಾನಕ್ ಮತ್ತು ಅನಾಯಸವಾಗಿ ಸುಂದರವಾಗಿ ಹಾಡಿದ್ದಾರೆ. ಇಷ್ಟಕ್ಕೇ ಏನೇನೋ ಕಥೆ ಕಟ್ಟುವುದು ಸರಿಯಲ್ಲ ಎಂದರು.

ದಲಿತರಿಗೆ ಸಿಎಂ ಹುದ್ದೆ ಕೊಡಬೇಕೆನ್ನುವ ವಿಷಯದಲ್ಲಿ ಸುಮ್ಮನ್ನೆ ಮೂಗು ತೂರಿಸುತ್ತಿರುವ ಬಿಜೆಪಿಯವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ದಲಿತರನ್ನು‌ ನೇಮಿಸಲಿ, ಅಲ್ಲೂ ಸಂಸದರಾದ ಹಿರಿಯರೂ ಆದ ಗೋವಿಂದ ಕಾರಜೋಳ, ರಮೇಶ ಜಿಗಜಿಣಗಿ ಇತರರಿದ್ದಾರೆ. ಮಾಡಲು‌ ಕೆಲಸವಿಲ್ಲದೇ ಪ್ರಚಾರಕ್ಕಾಗಿ ಏನೇನೋ ಹೇಳುತ್ತಾರೆಂದರು ಸಚಿವರು ಆರೋಪಿಸಿದರು.

ಜಿಲ್ಲೆಯಲ್ಲಿ ಅಂದಾಜು 25 ಸಾವಿರ ಹೆಕ್ಟರ್ ಬೆಳೆ ಹಾನಿಯಾಗಿದೆ : 

ಜಿಲ್ಲೆಯಲ್ಲಿ ಸುರಿದ ಹೆಚ್ಚುವರಿ ಮಳೆಯಿಂದಾಗಿ ಪ್ಯಾಡಿ ಹೊರತು ಪಡಿಸಿ ಸುಮಾರು 25 ಸಾವಿರ ಹೆಕ್ಟರ್ ವಿವಿಧ ಬೆಳೆಗಳು ಹಾನಿಯಾಗಿರುವ ಅಂದಾಜು ಇದೆ. ಈ ಬಗ್ಗೆ ಕೃಷಿ, ಕಂದಾಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಮೀಕ್ಷೆ ನಡೆಸಿ ವರದಿ ಕೊಟ್ಟ ನಂತರ ಪರಿಹಾರ ನೀಡಲಾಗುವುದೆಂದು ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.

ಸೋಮವಾರ ಬೆಳೆ ಹಾನಿ ಬಗ್ಗೆ ಜಿಲ್ಲೆಯ ಶಾಸಕರ ಜೊತೆ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.

ಕಳೆದ ಏಪ್ರಿಲ್ ತಿಂಗಳಿಂದ ಇಲ್ಲಿಯವರೆಗೂ ಸುಮಾರು 187 ಮನೆಗಳು ಕುಸಿದಿವೆ. ಇದರ ವರದಿ ತರಿಸಿ ಪರಿಹಾರ ನೀಡುವ‌ ಕೆಲಸ ಜಾರಿಯಲ್ಲಿದೆ. ಜಿಲ್ಲೆಯಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದು, ಇದರಲ್ಲಿ ಓರ್ವನು ಮರ ಬಿದ್ದು, ಇಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ಅವರಿಗೆಲ್ಲ ಪರಿಹಾರ ವಿತರಿಸಲಾಗಿದೆ‌ ಎಂದು ಸಚಿವರು ಹೇಳಿದರು.

ಜಿಲ್ಲೆಯಲ್ಲಿ ಹಾಳಾದ ರಸ್ತೆಗಳ ಪಟ್ಟಿ ಮಾಡಲಾಗುತ್ತಿದ್ದು, ಕೂಡಲೆ ದುರಸ್ತಿ ಕೆಲಸ ಮಾಡಲಾಗುವುದೆಂದರು.

ಶಾಸಕ ಚೆನ್ನಾರೆಡ್ಡಿ ಪಾಟೀಲ್, ಡಿಸಿ ಹರ್ಷಲ್ ಭೋಯರ್, ಜಿಪಂ ಸಿಇಒ‌ ಲವೀಶ್ ಓರಡಿಯಾ, ಎಸ್ ಪಿ ಪ್ರಥ್ವಿಕ್ ಶಂಕರ್, ಹೆಚ್ಚುವರಿ‌ ಡಿಸಿ ರಮೇಶ ಕೋಲಾರ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News