ಶಹಾಪುರ: ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆ, 371ಜೆ ವಿಶೇಷ ಸ್ಥಾನಮಾನದ ಸಮರ್ಪಕ ಅನುಷ್ಠಾನ ಹಾಗೂ ಶಹಾಪುರ ತಾಲೂಕಿಗೆ ಸರ್ಕಾರಿ ಲಾ, ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಬೇಕು ಎಂದು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್‌ಎಫ್‌ಐ) ವತಿಯಿಂದ 8ನೇ ತಾಲೂಕು ಸಮ್ಮೇಳನ ನಡೆಯಿತು.

ನಗರದ ಕನ್ನಡ ಸಾಹಿತ್ಯ ಪರಿಷತ್ತು ಆವರಣದಲ್ಲಿ ನಡೆದ ಸಮ್ಮೇಳನವನ್ನು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಭೀಮರಾಯ ಪೂಜಾರಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಿಕ್ಷಣ ಪ್ರತಿಯೊಬ್ಬ ವಿದ್ಯಾರ್ಥಿಯ ಹಕ್ಕಾಗಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ದೊರೆಯಲು ತಾಲೂಕು ಮಟ್ಟದಲ್ಲೇ ಅಗತ್ಯ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಬೇಕು. ಶಹಾಪುರ ತಾಲೂಕಿಗೆ ಲಾ, ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳ ಅಗತ್ಯವಿದ್ದು, ಈ ಬೇಡಿಕೆಗಳ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಒತ್ತಾಯಿಸಿದರು.

371ಜೆ ವಿಶೇಷ ಸ್ಥಾನಮಾನದ ಉದ್ದೇಶ ಕಲ್ಯಾಣ ಕರ್ನಾಟಕದ ಹಿಂದುಳಿದ ಪ್ರದೇಶಗಳ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೆ ವೇಗ ನೀಡುವುದಾಗಿದೆ. ಇದರ ಸಮರ್ಪಕ ಅನುಷ್ಠಾನದಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಶೈಕ್ಷಣಿಕ ಅವಕಾಶಗಳು ದೊರೆಯಬೇಕು. ವಿದ್ಯಾರ್ಥಿಗಳು ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಸಂಘಟಿತರಾಗಿ ಧ್ವನಿ ಎತ್ತುತ್ತಿರುವುದು ಮಹತ್ವದ ವಿಚಾರ ಎಂದರು.

ಎಸ್‌ಎಫ್‌ಐ ರಾಜ್ಯ ಸಮಿತಿ ಸದಸ್ಯ ಇಮಾಮಸಾಬ ನದಾಫ ಮಾತನಾಡಿ, ವಿದ್ಯಾರ್ಥಿ ಸಂಘಟನೆಗಳು ಕೇವಲ ಶೈಕ್ಷಣಿಕ ಸಮಸ್ಯೆಗಳಿಗೆ ಸೀಮಿತವಾಗದೆ ಅಸಮಾನತೆ, ನಿರುದ್ಯೋಗ, ಕೋಮು ವಿಭಜನೆ ಸೇರಿದಂತೆ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುವ ಸಾಮಾಜಿಕ ಸಮಸ್ಯೆಗಳ ವಿರುದ್ಧವೂ ಧ್ವನಿ ಎತ್ತಬೇಕು. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಸಂವಿಧಾನಿಕ ಮೌಲ್ಯ ಹಾಗೂ ಸೌಹಾರ್ದತೆಯ ಚಿಂತನೆಯನ್ನು ಬೆಳೆಸುವ ಕೆಲಸವನ್ನು ಸಂಘಟನೆ ಮಾಡುತ್ತಿದೆ ಎಂದರು.

ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಿ, ವಿದ್ಯಾರ್ಥಿಗಳಿಗೆ ತಮ್ಮ ಪ್ರತಿನಿಧಿಗಳನ್ನು ಪ್ರಜಾಸತ್ತಾತ್ಮಕವಾಗಿ ಆಯ್ಕೆ ಮಾಡಿಕೊಳ್ಳುವ ಅವಕಾಶ ಕಲ್ಪಿಸಬೇಕು. ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಡಳಿತ ಮಂಡಳಿ ಹಾಗೂ ಸರ್ಕಾರದ ಗಮನಕ್ಕೆ ತಂದು ಪರಿಹಾರಕ್ಕಾಗಿ ಹೋರಾಟ ನಡೆಸುವುದು ಎಸ್‌ಎಫ್‌ಐನ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಎಸ್‌ಎಫ್‌ಐ ನೂತನ ತಾಲೂಕು ಅಧ್ಯಕ್ಷೆ ರೇಣುಕಾ ಪೂಜಾರಿ ಮಾತನಾಡಿ, ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗಾಗಿ ಸಂಘಟನೆ ನಿರಂತರ ಹೋರಾಟ ನಡೆಸುತ್ತಿದೆ. ಶಿಕ್ಷಣದ ವ್ಯಾಪಾರೀಕರಣ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿನ ಅಸಮಾನತೆಗಳನ್ನು ತಡೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಶಹಾಪುರ ತಾಲೂಕಿನ ಶೈಕ್ಷಣಿಕ ಅಭಿವೃದ್ಧಿಗಾಗಿ ವಿದ್ಯಾರ್ಥಿಗಳನ್ನು ಸಂಘಟಿಸಿ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದರು.

ಸಮ್ಮೇಳನದಲ್ಲಿ 371ಜೆ ಸಮರ್ಪಕ ಜಾರಿ, ವಿದ್ಯಾರ್ಥಿ ಸಂಘಗಳ ಚುನಾವಣೆ, ಶಹಾಪುರಕ್ಕೆ ಸರ್ಕಾರಿ ಲಾ, ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳ ಸ್ಥಾಪನೆ ಸೇರಿದಂತೆ ವಿವಿಧ ಶೈಕ್ಷಣಿಕ ಬೇಡಿಕೆಗಳ ಕುರಿತು ಚರ್ಚಿಸಲಾಯಿತು. ‘ಸ್ವಾತಂತ್ರ್ಯ–ಪ್ರಜಾಪ್ರಭುತ್ವ–ಸಮಾಜವಾದ’ ಆಶಯದೊಂದಿಗೆ ವಿದ್ಯಾರ್ಥಿಗಳ ಹಕ್ಕುಗಳು ಹಾಗೂ ಶಿಕ್ಷಣದ ಅಭಿವೃದ್ಧಿಗಾಗಿ ಹೋರಾಟ ಮುಂದುವರಿಸುವ ಸಂಕಲ್ಪ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕ ಸಂಘಟನೆಯ ತಾಲೂಕು ಅಧ್ಯಕ್ಷ ದೇವೇಂದ್ರ ಕುಮಾರ್ ಹೊತ್ಪೇಟ್, ಎಸ್‌ಎಫ್‌ಐ ತಾಲೂಕು ಸಮಿತಿ ಮುಖಂಡರಾದ ತಾಯಣ್ಣಗೌಡ ಟೋಕಪೂರ, ಮಲ್ಕನ ಗುಂಡಳ್ಳಿ, ಮೌನೇಶ್, ರೇಣುಕಾಚಾರ್ಯ ಹೋತೇಪೆತ್, ಭೀಮರೆಡ್ಡಿ ಸೇರಿದಂತೆ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಪ್ರತಿನಿಧಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor