ಸುರಪುರ | ರೈತರ ಸಂಪೂರ್ಣ ಸಾಲಮನ್ನಾ ಮಾಡಿ, ಹೊಸ ಸಾಲ ನೀಡಲು ರೈತ ಸಂಘದಿಂದ ಆಗ್ರಹ
ಸುರಪುರ: ಬರಗಾಲದಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದು, ಸರ್ಕಾರ ರೈತರ ಸಂಪೂರ್ಣ ಸಾಲಮನ್ನಾ ಮಾಡಿ ಮತ್ತೆ ಹೊಸ ಸಾಲ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಭಾವಿ ಒತ್ತಾಯಿಸಿದರು.
ತಾಲೂಕಿನ ದೇವಪುರ ಕ್ರಾಸ್‌ನಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಬೆಳೆ ಕೈಕೊಟ್ಟರೂ ಸಾಲಸೂಲ ಮಾಡಿ ಕೃಷಿ ಮಾಡಿರುವ ರೈತರು ಬರಗಾಲದಿಂದ ತೀವ್ರ ನಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರಿಗೆ ಸಮರ್ಪಕ ಪರಿಹಾರ ನೀಡದೆ, ಪ್ರತಿ ಎಕರೆಗೆ ಕೇವಲ 2,500 ರೂ. ಪರಿಹಾರ ಘೋಷಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರದ ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್‌ನಿಂದ ಜಂಟಿಯಾಗಿ ಪ್ರತಿ ಎಕರೆಗೆ ಕನಿಷ್ಠ 25 ಸಾವಿರ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಹಣಮಂತ್ರಾಯ ಚಂದ್ಲಾಪುರ ಮಾತನಾಡಿ, ಸರ್ಕಾರ ಮುಂಗಾರು ಬೆಳೆಗಳಿಗೆ ಯಾವುದೇ ವಾರಾಬಂದಿ ಮಾಡದೆ ನಿರಂತರವಾಗಿ ನೀರು ಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲವಾದಲ್ಲಿ ಕೊನೆ ಭಾಗದ ರೈತರಿಗೆ ನೀರು ದೊರೆಯದೆ ಮುಂಗಾರು ಬೆಳೆಯೂ ಸಂಪೂರ್ಣ ನಷ್ಟವಾಗಲಿದೆ. ಆದ್ದರಿಂದ ಕೂಡಲೇ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಬೀದರ್–ಬೆಂಗಳೂರು ಹೆದ್ದಾರಿ ಬಂದ್ ಮಾಡಿದ್ದರಿಂದ ವಾಹನಗಳು ಸಾಲುಗಟ್ಟಿ ನಿಂತು ವಾಹನ ಸವಾರರು ಪರದಾಡುವಂತಾಯಿತು. ಬಳಿಕ ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಹುಸೇನ್ ಸಾಬ್ ಎ. ಸರಕಾವತ್ ಹಾಗೂ ಕೆಬಿಜೆಎನ್‌ಎಲ್ ಇಲಾಖೆಯ ಮುಖ್ಯ ಸಹಾಯಕ ಅಭಿಯಂತರರು ಆಗಮಿಸಿ ಮುಖ್ಯಮಂತ್ರಿ, ಶಾಸಕರು ಹಾಗೂ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ಸ್ವೀಕರಿಸಿದರು.
ಡಿವೈಎಸ್ಪಿ ಶಿವರಾಜ ಕಟಕಭಾವಿ ನೇತೃತ್ವದಲ್ಲಿ ಆರಕ್ಷಕ ನಿರೀಕ್ಷಕ ಉಮೇಶ ಎಂ. ನಾಯಕ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದರು.
ಪ್ರತಿಭಟನೆಯಲ್ಲಿ ಮುಖಂಡರಾದ ಸಾಹೇಬಗೌಡ ಮದಲಿಂಗನಾಳ, ಸಂಘಟನೆಯ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷ ಮಹಾದೇವಮ್ಮ ಬೇವಿನಾಳ ಮಠ, ದೇವಿಂದ್ರಪ್ಪ ಪತ್ತಾರ ಇತರರು ಮಾತನಾಡಿದರು. ವೆಂಕಟೇಶ ಗೌಡ ಕುಪಗಲ್, ದೇವೇಂದ್ರಪ್ಪ ಬಳಿಚಕ್ರ, ತಿಮ್ಮಪ್ಪ ಬಾಪೂರ, ತಿಪ್ಪಣ್ಣ ಜಂಪಾ, ಹನುಮೇಗೌಡ ನಾರಾಯಣಪುರ, ತಿರುಪತಿ ಕುಪಗಲ್, ಮಲ್ಲಣ್ಣ ಹಾಲಭಾವಿ, ಭೀಮಣ್ಣ ತಿಪ್ಪನಟಗಿ, ಭೀಮನಗೌಡ ಕರ್ನಾಳ, ರಾಘು ಕುಪಗಲ್, ಶಿವನಗೌಡ ರುಕ್ಮಾಪುರ, ಮೌನೇಶ ಹರಳಹಳ್ಳಿ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.
ಸರ್ಕಾರ ಸಾಲಮನ್ನಾ ಮಾಡದಿದ್ದರೆ ಹೋರಾಟ :
ಸಹಕಾರಿ ಬ್ಯಾಂಕ್‌ಗಳ ಸಾಲ ವಸೂಲಾತಿಯನ್ನು ಒಂದು ವರ್ಷ ಮುಂದೂಡುವ ಬದಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸುತ್ತೇವೆ.
-ಮಹಾದೇವಮ್ಮ ಬೇವಿನಾಳಮಠ, ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ