ಯಾದಗಿರಿ: ತಾಲೂಕಿನ ಎಂ.ಹೊಸಳ್ಳಿ ಗ್ರಾಮದಲ್ಲಿ ನಡೆಯುತ್ತಿರುವ ಯುಜಿಡಿ ಕಾಮಗಾರಿಯನ್ನು ಕೂಡಲೇ ಸ್ಥಗಿತಗೊಳಿಸುವಂತೆ ಎಂ.ಹೊಸಳ್ಳಿ ಗ್ರಾಮ ಹಾಗೂ ತಾಂಡಾದ ನಿವಾಸಿಗಳು ಬುಧವಾರ ಜಿಲ್ಲಾಧಿಕಾರಿ ರಾಹುಲ್ ಪಾಂಡ್ವೆ ಅವರಿಗೆ ಮನವಿ ಸಲ್ಲಿಸಿದರು.

ಯುಜಿಡಿ ಕಾಮಗಾರಿ ರದ್ದುಪಡಿಸುವಂತೆ ಈ ಹಿಂದೆ 2026ರ ಜೂನ್ 10ರಂದು ಮನವಿ ಸಲ್ಲಿಸಿದ್ದರೂ ಕಾಮಗಾರಿ ನಿರಂತರವಾಗಿ ನಡೆಯುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಕಾಮಗಾರಿಯಿಂದ ಎಂ.ಹೊಸಳ್ಳಿ ಗ್ರಾಮ, ತಾಂಡಾ ಸೇರಿದಂತೆ ಕೋಯಿಲೂರು ಗ್ರಾಮಗಳಲ್ಲಿಯೂ ವಾಯು ಮಾಲಿನ್ಯ ಉಂಟಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಈ ಕುರಿತು ಗ್ರಾಮಸ್ಥರು, ಅದರಲ್ಲೂ ಮಹಿಳೆಯರು ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ತೆರಳಿ ಕೆಲಸ ನಿಲ್ಲಿಸುವಂತೆ ಮನವಿ ಮಾಡಿದರೂ ಕಾಮಗಾರಿ ಮುಂದುವರಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಎಂ.ಹೊಸಳ್ಳಿ ಗ್ರಾಮವು ನಗರಸಭೆ ವ್ಯಾಪ್ತಿಗೆ ಒಳಪಟ್ಟಿದ್ದು, ಇಲ್ಲಿ ಎನ್‌ಎ ಮಾಡಿಸಿ ನಿವೇಶನಗಳನ್ನು ರೂಪಿಸಲಾಗಿದೆ. ಹೀಗಾಗಿ ಕಾಮಗಾರಿಯಿಂದ ಜನರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೂಡಲೇ ಯುಜಿಡಿ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಭೀಮರೆಡ್ಡಿ ಪೊಲೀಸ್ ಪಾಟೀಲ್, ಮಹಿಪಾಲರೆಡ್ಡಿಗೌಡ ಪೊಲೀಸ್ ಪಾಟೀಲ್, ಭರತೇಶಗೌಡ ಪೊಲೀಸ್ ಪಾಟೀಲ್, ಬಸ್ಸುಗೌಡ ಹೊಸಳ್ಳಿ, ಭೀಮರೆಡ್ಡಿ ನಿಲಹಳ್ಳಿ, ಅಶೋಕರೆಡ್ಡಿ, ಯಂಕಪ್ಪ ನಾಟಿಕಾರ, ದೇವೇಂದ್ರಪ್ಪ ನಾಟಿಕಾರ, ಬಾಲಪ್ಪ, ಮಹಾದೇವ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor