×
Ad

ಬೆಳೆಹಾನಿಯಾದ ಎಲ್ಲ ರೈತರಿಗೆ ಪರಿಹಾರ ಕಲ್ಪಿಸಲು ಪ್ರಮಾಣಿಕವಾಗಿ ಪ್ರಯತ್ನಿಸಿ : ಶಾಸಕ ಪ್ರಭು ಚೌವ್ಹಾಣ್

Update: 2025-09-12 21:18 IST

ಬೀದರ್ : ಭಾರೀ ಮಳೆಯಿಂದಾಗಿ ಔರಾದ್ (ಬಿ) ಹಾಗೂ ಕಮಲನಗರ್ ತಾಲ್ಲೂಕುಗಳಲ್ಲಿ ಸಾಕಷ್ಟು ಹಾನಿಯಾಗಿದ್ದು, ಪ್ರತಿ ಗ್ರಾಮ ಮತ್ತು ಹೊಲಗಳಿಗೆ ಭೇಟಿ ನೀಡಿ ಸಮೀಕ್ಷೆಯನ್ನು ಅಚ್ಚುಕಟ್ಟಾಗಿ ನಡೆಸುವ ಮೂಲಕ ಬೆಳೆನಷ್ಟದಿಂದ ನೊಂದಿರುವ ಎಲ್ಲ ರೈತರಿಗೆ ಪರಿಹಾರ ಕಲ್ಪಿಸಲು ಪ್ರಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಶಾಸಕ ಪ್ರಭು ಚೌವ್ಹಾಣ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಇಂದು ಔರಾದ್ (ಬಿ) ತಾಲ್ಲೂಕು ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮೀಕ್ಷೆ ಕುರಿತು ಮಾಹಿತಿಗೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕರು, ಜುಲೈ ಮತ್ತು ಆಗಸ್ಟ್ ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕ್ಷೇತ್ರದಲ್ಲಿನ ಅಂದಾಜು ಒಂದು ಲಕ್ಷ ಹೆಕ್ಟೇರ್ ಕೃಷಿ ಭೂಮಿಯ ಪೈಕಿ ಸುಮಾರು 60 ಸಾವಿರ ಹೆಕ್ಟೇರ್ ಗಿಂತ ಹೆಚ್ಚು ಬೆಳೆ ಹಾನಿಯಾಗಿದೆ. ಆದರೆ 30 ಸಾವಿರ ಹೆಕ್ಟೇರ್ ಮಾತ್ರ ಸಮೀಕ್ಷೆ ಮಾಡಿರುವುದು ಸರಿಯಲ್ಲ ಎಂದು ಬೇಸರ ಹೊರಹಾಕಿದರು.

ನದಿ ಪ್ರದೇಶ, ಹಳ್ಳ ಕೊಳ್ಳ ಮತ್ತು ತಗ್ಗು ಪ್ರದೇಶದಲ್ಲಿನ ಎಲ್ಲ ಬೆಳೆಗಳು ಸಂಪೂರ್ಣ ಮುಳುಗಡೆಯಾಗಿವೆ. ಕೆರೆ ಕಟ್ಟೆಗಳು ಒಡೆದು ಮಣ್ಣಿನ ಸಹಿತ ಬೆಳೆಗಳು ಕೊಚ್ಚಿಕೊಂಡು ಹೋಗಿವೆ. ಬಿತ್ತನೆಯಾದ ಸೋಯಾ, ತೊಗರಿ, ಹತ್ತಿ ನಷ್ಟವಾಗಿದ್ದು, ಕಟಾವಿಗೆ ಬಂದ ಉದ್ದು, ಹೆಸರು ಸಂಪೂರ್ಣ ಹಾಳಾಗಿದೆ. ಸಮೀಕ್ಷೆಗೆ ನಿಯೋಜಿಸಿದ ಹಲವು ಸಿಬ್ಬಂದಿ ಗ್ರಾಮಗಳಿಗೆ ಭೇಟಿ ನೀಡದೇ ಕಚೇರಿಯಲ್ಲಿ ಕುಳಿತು ವರದಿ ಸಲ್ಲಿಸುತ್ತಿದ್ದಾರೆ. ಹೀಗಾದರೆ ರೈತರ ಗತಿ ಏನಾಗಬಹುದು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬೆಳೆವಿಮೆ ನೀಡುವ ಕಂಪನಿಗಳಿಂದ ರೈತರಿಗೆ ಸಾಕಷ್ಟು ಅನ್ಯಾಯವಾಗುತ್ತಿದೆ. ಔರಾದ್ (ಬಿ) ಕ್ಷೇತ್ರದಲ್ಲಿ ಅತೀ ಹೆಚ್ಚು ರೈತರು ಯೋಜನೆಯಡಿ ನೋಂದಣಿಯಾಗಿದ್ದಾರೆ. ಕಂಪನಿಯವರು ತಮ್ಮಷ್ಟಕ್ಕೆ ತಾವೇ ಸಮೀಕ್ಷೆ ಮಾಡದೇ ಗ್ರಾಮ ಲೆಕ್ಕಾಧಿಕಾರಿ, ಗ್ರಾಮ ಸೇವಕ ಮತ್ತು ಪಿಡಿಓಗಳನ್ನು ಸಮೀಕ್ಷೆಗೆ ಕರೆದೊಯ್ಯಬೇಕು. ಎಲ್ಲ ರೈತರಿಗೆ ತಂತ್ರಾಂಶದ ಜ್ಞಾನ ಇರುವುದಿಲ್ಲ. ಹಾಗಾಗಿ ರೈತರಿಗೆ ಆಫ್‌ಲೈನ್ ಮೂಲಕ ಮಾಹಿತಿ ಸಲ್ಲಿಸಲು ಅವಕಾಶ ಕಲ್ಪಿಸಿ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದರು.

ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಸಮಸ್ಯೆಯನ್ನು ಶೀಘ್ರ ಪರಿಹರಿಸಬೇಕು. ಕೆಲವು ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಸರಿಯಾಗಿ ಓದು ಬರೆಯಲು ಬರುತ್ತಿಲ್ಲ. ಹೀಗಾದರೆ ಫಲಿತಾಂಶ ಸುಧಾರಣೆ ಸಾಧ್ಯವಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿ ವಿಶೇಷ ಮುತುವರ್ಜಿ ವಹಿಸಿ ಶಿಕ್ಷಣದ ಗುಣಮಟ್ಟ ಸುಧಾರಿಸಬೇಕು. ಸರ್ಕಾರಿ ಶಾಲೆಗಳ ನಿವೇಶನ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಸೂಚನೆ ನೀಡಿದರು.

ಅಂಗನವಾಡಿ ಕೇಂದ್ರಗಳಲ್ಲಿ ಸಾಕಷ್ಟು ಅವ್ಯವಹಾರವಾಗುತ್ತಿವೆ. ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುವ ಆಹಾರ ಸಾಮಗ್ರಿಗಳು ಸಂಪೂರ್ಣ ಕಳಪೆಯಿಂದ‌ ಕೂಡಿವೆ. ಆಹಾರ ಸಮಸ್ಯೆ ಸರಿಪಡಿಸಬೇಕು. ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕರ ನೇಮಕಾತಿಯಲ್ಲಿ ಇಲಾಖೆ ಸಿಬ್ಬಂದಿ ಹಣ ವಸೂಲಿಗೆ ಇಳಿದಿರುವುದು ಗಮನಕ್ಕೆ ಬಂದಿದೆ. ಅಧಿಕಾರಿಗಳು ಇಂಥವುಗಳನ್ನು ಗಂಭೀರವಾಗಿ ಪರಿಗಣಿಸಿ ಭ್ರಷ್ಟ ಸಿಬ್ಬಂದಿಯನ್ನು ಮನೆಗೆ ಕಳುಹಿಸಬೇಕು ಎಂದು ಗುಡುಗಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಆಡಳಿತಾಧಿಕಾರಿ ಸೂರ್ಯಕಾಂತ್ ಬಿರಾದಾರ್, ತಹಶೀಲ್ದಾರರಾದ ಮಹೇಶ್ ಪಾಟೀಲ್, ರಮೇಶ್ ಪೆದ್ದೆ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಪಾಟೀಲ್, ಸಹಾಯಕ ಕೃಷಿ ನಿರ್ದೇಶಕ ಧೂಳಪ್ಪ‌, ಹಣಮಂತರಾವ್ ಕೌಟಗೆ ಹಾಗೂ ಪೊಲೀಸ್ ವೃತ್ತ ನಿರೀಕ್ಷಕ ರಘುವೀರಸಿಂಗ್ ಠಾಕೂರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News