ಗಿರಿಜಿಲ್ಲೆಯನ್ನು ಪೋಲಿಯೋ ಮುಕ್ತವಾಗಿಸಿ : ಶಾಸಕ ಚೆನ್ನಾರೆಡ್ಡಿ ಪಾಟೀಲ್
ಯಾದಗಿರಿ: ಪೋಲಿಯೋ ಮುಕ್ತ ಭಾರತ ಆಗಬೇಕು. ಯಾವ ಮಗು ಕೂಡಾ ಅಂಗವಿಕಲತೆ ಹೊಂದಬಾರದು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೂ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಹೇಳಿದರು.
ನಗರದ ಲಾಡೆಸ್ ಗಲ್ಲಿಯ ಶ್ರೀ ಭವಾನಿ ದೇವಸ್ಥಾನದ ಆವರಣದಲ್ಲಿ ಭಾನುವಾರ ಬೆಳಿಗ್ಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿರುವ ಒಟ್ಟು 1,66,693 ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ತಪ್ಪದೇ ಪಲ್ಸ್ ಪೋಲಿಯೋ ಲಸಿಕೆ ಹಾಕಬೇಕು. ನಿಗದಿತ ಕಾರ್ಯಕ್ರಮದಂತೆಯೇ ಆರೋಗ್ಯ ಇಲಾಖೆ ಸಿಬ್ಬಂದಿ ಜಿಲ್ಲೆಯ ಪ್ರತಿ ಮನೆ, ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಇರುವ ಮಕ್ಕಳನ್ನು ಗುರುತಿಸಿ, ತಿಳಿಹೇಳಿ ಲಸಿಕೆ ಹಾಕುವ ಕೆಲಸ ಚಾಚು ತಪ್ಪದೇ ಮಾಡಬೇಕೆಂದರು.
ಜನರಲ್ಲಿ ಈ ಕುರಿತು ತಪ್ಪು ತಿಳುವಳಿಕೆ ಇದ್ದರೇ ಅದನ್ನು ಹೊಗಲಾಡಿಸಬೇಕೆಂದ ಅವರು, ಒಟ್ಟಾರೆ ಪೋಲಿಯೋ ಮುಕ್ತ ಭಾರತ ಮಾಡಬೇಕೆಂದು ಶಾಸಕರು ಹೇಳಿದರು.
ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಮಾತನಾಡಿ, ಇದೊಂದು ರಾಷ್ಟ್ರಿಯ ಕಾರ್ಯಕ್ರಮವಾಗಿದ್ದು, ಜನರ ಸಹಕಾರ ಅಗತ್ಯವಿದೆ. ಆರೋಗ್ಯ ಸಿಬ್ಬಂದಿ ಬಂದಾಗ ಐದು ವರ್ಷದೊಳಗಿನ ಪ್ರತಿ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಲು ಅನುವು ಮಾಡಿಕೊಡಬೇಕೆಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಒರಡಿಯಾ ಮಾತನಾಡಿ, ಡಿ.21ರಿಂದ 24ರವರೆಗೆ ನಾಲ್ಕು ದಿನಗಳ ಕಾರ್ಯಕ್ರಮದ ಯಶಸ್ಸಿಗೆ ಜಿಪಂನ ಸಿಬ್ಬಂದಿ ಸೇರಿದಂತೆಯೇ ವಿವಿಧ ಇಲಾಖೆಗಳು ಸಹಕರಿಸಬೇಕೆಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ ಬಿರಾದಾರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆರ್ ಸಿ ಎಚ್ ಅಧಿಕಾರಿ ಡಾ.ಮಲ್ಲಪ್ಪ, ತಾಲೂಕು ಆರೋಗ್ಯ ಅಧಿಕಾರಿ ಹಣಮಂತರೆಡ್ಡಿ ಹಾಗೂ ತುಳಸಿರಾಮ ಚವ್ಹಾಣ, ಸುರೇಶ ಮಡ್ಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಧಿಕಾರಿ ತಿಪ್ಪಣ್ಣ, ಬಿಇಓ ವೀರಪ್ಪ ಕನ್ನಳ್ಳಿ, ಸಿಡಿಪಿಓ ದೀಪಿಕಾ ಬಿ.ವಿ, ತಾಲೂಕು ಆರೋಗ್ಯ ಶಿಕ್ಷಣ ಅಧಿಕಾರಿ ತುಳಸಿರಾಮ ಚವ್ಹಾಣ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಲಕ್ಣ್ಮಿ ಮುಂಡಾಸ್, ಜಗನಾಥ ಸೇರಿದಂತೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.