ಯಾದಗಿರಿ | ವಿಬಿ-ಜಿ ರಾಮ್ ಜಿ ಮಸೂದೆ ವಿರೋಧಿಸಿ ಡಿ.22ರಂದು ಸಂಸದರ ಮನೆಗಳ ಎದುರು ಪ್ರತಿಭಟನೆ : ಶರಣಗೌಡ
ಯಾದಗಿರಿ: ವಿಬಿ ಜಿ ರಾಮ್ ಜಿ ಮಸೂದೆಯನ್ನು ತಿರಸ್ಕರಿಸಿ ಎಂಜಿಎನ್‌ಆರ್‌ಇಜಿಎ ಕಾಯ್ದೆಯನ್ನು ಉಳಿಸಲು ಒತ್ತಾಯಿಸಿ ಡಿ. 22ರಂದು ಸಂಸದರ ನಿವಾಸಗಳ ಎದುರು ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಜಿಲ್ಲಾಧ್ಯಕ್ಷ ಶರಣಗೌಡ ಹೇಳಿದರು.
ನಗರದಲ್ಲಿನ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾರ್ಮಿಕರ ಹಕ್ಕುಗಳನ್ನು ನಿರಾಕರಿಸುವ ಹಾಗೂ ಗ್ರಾಮ ಪಂಚಾಯತ್ ಗಳನ್ನು ದುರ್ಬಲಪಡಿಸುವ ಮೂಲಕ ಸಾಮಾಜಿಕ ನ್ಯಾಯವನ್ನೇ ಅಣಕಿಸುವ ವಿಬಿ ಜಿ ರಾಮ್ ಜಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲಾಗಿದ್ದು, ಇದು ರಾಜ್ಯಸಭೆಯಲ್ಲಿ ಮಂಡಿಸುವ ಮುಂಚೆಯೇ ಈ ಮಸೂದೆಯನ್ನು ತಿರಸ್ಕರಿಸಬೇಕು ಎಂದು ಆಗ್ರಹಿಸಿ ದೇಶವ್ಯಾಪಿ ಹೋರಾಟಗಳು ಆರಂಭಿಸಲಾಗಿದ್ದು, ಅದರ ಭಾಗವಾಗಿ ಈ ಹೋರಾಟ ನಡೆಸಲಾಗುತ್ತಿದೆ ಎಂದರು.
ಉದ್ಯೋಗವನ್ನು ಬೇಡಿಕೆ ಆಧಾರಿತ ಹಕ್ಕಿನಿಂದ ಪೂರೈಕೆ ಆಧಾರಿತ ಯೋಜನೆಯಾಗಿ ಬದಲಾಯಿಸಿರುವ ಈ ಮಸೂದೆಯನ್ನು ಅನುಷ್ಠಾನಗೊಳಿಸಿದರೆ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳಲಾಗುತ್ತದೆ. ಇದರ ಮೇಲೆ ಕೇಂದ್ರ ಸರಕಾರದ ನಿಯಂತ್ರಣ ಬಿಗಿಗೊಳಿಸಲಾಗಿದೆ. ಉದ್ಯೋಗದ ಖಾತ್ರಿಯೇ ಇಲ್ಲದಂತಾಗಲಿದೆ. ರಾಜ್ಯ ಸರಕಾರಗಳ ಮೇಲೆಯೂ ಹೊರೆಯಾಗಲಿದ್ದು, ಇದು ಸಂಕಷ್ಟಕ್ಕೆ ಕಾರಣವಾಗಲಿದೆ ಎಂದು ಆರೋಪಿಸಿದರು.
ಕಾಮಗಾರಿಗಳನ್ನು ಕೇಂದ್ರ ಸರಕಾರವೇ ನಿರ್ಧರಿಸುವ ಮೂಲಕ ಗ್ರಾಮ ಸಭೆಗಳನ್ನು ದುರ್ಬಲಗೊಳಿಸಿದೆ. 73ನೇ ತಿದ್ದುಪಡಿಯ ವಿಕೇಂದ್ರಿಕೃತ ಆಡಳಿತವನ್ನು ಗಾಳಿಗೆ ತೂರಲಾಗಿದೆ. ಡಿಜಿಟಲ್ ಹಾಜರಾತಿ ಎನ್‌ಎಂಎಂಎಸ್ ಮತ್ತು ಆಧಾರ್ ಕಾರ್ಡ್ ಆಧಾರಿತ ಪಾವತಿಗಳು ಕಾರ್ಮಿಕರನ್ನು ಕೆಲಸದಿಂದ ಹೊರಗಿಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಲ್ಲಪ್ಪ ದೊಡ್ಮನಿ ಬೆಳಗೇರಾ, ನವಚೇತನ ಮಹಿಳಾ ಒಕ್ಕೂಟದ ಸುಶೀಲಮ್ಮ, ಬನ್ನಪ್ಪ ಯಲಸತ್ತಿ, ರೀನಾ, ದೇವಪುತ್ರ ಉಪಸ್ಥಿತರಿದ್ದರು.