ಯಾದಗಿರಿ | ಕೆ.ಕೆ. ಭಾಗದ ಶೈಕ್ಷಣಿಕ ಬಿಕ್ಕಟ್ಟು ನಿವಾರಣೆಗೆ ʼಕಲಿಕೆಯೇ ಕಲ್ಯಾಣʼ ಅಭಿಯಾನ
ಯಾದಗಿರಿ: ಕಲ್ಯಾಣ ಕರ್ನಾಟಕ ಪ್ರದೇಶದ ಗಂಭೀರ ಶೈಕ್ಷಣಿಕ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (SIO) ಕರ್ನಾಟಕ ಘಟಕವು, ಸೆಂಟರ್ ಫಾರ್ ಎಜುಕೇಷನಲ್ ರಿಸರ್ಚ್ & ಅನಾಲಿಸಿಸ್ (CERA) ಸಹಯೋಗದೊಂದಿಗೆ ʼಕಲಿಕೆಯೇ ಕಲ್ಯಾಣʼ ಎಂಬ ಎರಡು ತಿಂಗಳ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದೆ ಎಂದು ಎಸ್.ಐ.ಓ ಸಂಘಟನಾ ಕಾರ್ಯದರ್ಶಿ ಸಲ್ಲಾವುದ್ಧಿನ್ ಜಾಗೀರದಾರ್ ಹೇಳಿದರು.
ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡಿ.15 ರಿಂದ ಫೆ.15 ರವರೆಗೆ ನಡೆಯಲಿರುವ ಈ ಅಭಿಯಾನವು ಕಲ್ಯಾಣ ಕರ್ನಾಟಕದ ಸರ್ಕಾರಿ ಹಾಗೂ ಮೌಲಾನಾ ಆಜಾದ್ ಶಾಲೆಗಳ ಮೇಲೆ ಕೇಂದ್ರೀಕೃತವಾಗಿದೆ. ಇತ್ತೀಚಿನ SSLC ಮತ್ತು ದ್ವಿತೀಯ ಪಿಯುಸಿ ಫಲಿತಾಂಶಗಳು ಪ್ರದೇಶದ ಶೈಕ್ಷಣಿಕ ಹಿಂದುಳಿತವನ್ನು ಬಹಿರಂಗಪಡಿಸಿವೆ. ಶಿಕ್ಷಕರ ಕೊರತೆ, ಏಕ-ಶಿಕ್ಷಕ ಶಾಲೆಗಳ ಹೆಚ್ಚಳ ಹಾಗೂ ಕಡಿಮೆ ದಾಖಲಾತಿ ಪ್ರಮುಖ ಸಮಸ್ಯೆಗಳಾಗಿವೆ ಎಂದರು.
ಶಿಕ್ಷಣದ ಮಹತ್ವದ ಕುರಿತು ಅರಿವು ಮೂಡಿಸುವುದು, SSLC ಅನುತ್ತೀರ್ಣ ಪ್ರಮಾಣ ಕಡಿಮೆ ಮಾಡುವುದು ಹಾಗೂ ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಸಮಸ್ಯೆಯನ್ನು ಮಾಧ್ಯಮ ಮತ್ತು ರಾಜಕೀಯ ಚರ್ಚೆಗೆ ತರುವುದೇ ಅಭಿಯಾನದ ಮುಖ್ಯ ಗುರಿಯಾಗಿದೆ ಎಂದು SIO ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಎಸ್.ಐ.ಓ ಸಂಘಟನಾ ಅಧ್ಯಕ್ಷ ಅಲ್ಲಾವುದ್ದೀನ್ ಜಾಗಿರದಾರ, ಪದಾಧಿಕಾರಿಗಳಾದ ಸೈಯದ್ ಫೈಝಾನ್, ಅಬ್ದುಲ್ ಬಸಿತ್, ಸಾಹಿಲ್, ಜಾಕಿರ್ ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.