×
Ad

ಯಾದಗಿರಿ | ಶಾಲೆಗಳ ವ್ಯಾಪ್ತಿಯಲ್ಲಿ ಹೈಟೆನ್ಷನ್ ವೈರ್ -ಟ್ರಾನ್ಸ್‌ ಫಾರ್ಮರ್ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಿ: ಶಶಿಧರ ಕೋಸಂಬೆ

Update: 2025-12-20 17:50 IST

ಯಾದಗಿರಿ : ಶಾಲೆಗಳ ವ್ಯಾಪ್ತಿಯಲ್ಲಿ ಭಯಮುಕ್ತ ವಾತಾವರಣ ನಿರ್ಮಿಸಲು ಅನುಕೂಲವಾಗುವಂತೆ ಶಾಲಾ ಆವರಣ ಮೇಲಿಂದ ಹಾದುಹೋಗುವ ಹೈಟೆನ್ಷನ್ ವೈರ್ ಹಾಗೂ ಶಾಲೆಗಳ ಸಮೀಪದ ಟ್ರಾನ್ಸ್ ಫಾರ್ಮ್ ಗಳ ಸ್ಥಳಾಂತರಕ್ಕೆ ತಕ್ಷಣ ಕ್ರಮ ಕೈಗೊಳ್ಳುವಂತೆ ರಾಜ್ಯ ಮಕ್ಕಳು ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಶಶಿಧರ ಕೋಸಂಬೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಉಚಿತ ಕಡ್ಡಾಯ ಶಿಕ್ಷಣ ಕಾಯ್ದೆ -2009, ಪೋಕ್ಸೋ ಕಾಯ್ದೆ -2012 ಹಾಗೂ ಮಕ್ಕಳ ರಕ್ಷಣಾ ನೀತಿ- 2016ರ ಅನುಷ್ಠಾನ ಕುರಿತು ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

ಜಿಲ್ಲೆಯ ಮಕ್ಕಳು ಭಯಮುಕ್ತ ವಾತಾವರಣದಲ್ಲಿ ಅಧ್ಯಯನ ಮಾಡಬೇಕು. ಜಿಲ್ಲೆಯ ಸುಮಾರು 72 ಶಾಲಾ ಆವರಣದಿಂದ ಹೈಟೆನ್ಷನ್ ವೈರ್ ಹಾದು ಹೋಗಿದೆ. ಅದರಂತೆ ಸುಮಾರು 42 ಶಾಲೆಗಳ ಸಮೀಪದ ಟ್ರಾನ್ಸ್ ಫಾರ್ಮರ್ಸ್ ಗಳನ್ನು ಒಂದು ತಿಂಗಳ ಅವಧಿಯೊಳಗೆ ಸ್ಥಳಾಂತರಕ್ಕೆ ಕ್ರಮಕೈಗೊಳ್ಳಬೇಕು. ಇದಕ್ಕೆ ತಪ್ಪಿದಲ್ಲಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು.

ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಸೇರಿಸುವ ಕಾರ್ಯ ಪ್ರಾಮಾಣಿಕವಾಗಿ ಮಾಡುವಂತೆ ಅವರು ಸೂಚಿಸಿದರು.

ಜಿಲ್ಲೆಯಲ್ಲಿ ಎಸೆಸಸೆಲ್ಸಿ ಫಲಿತಾಂಶ ಸುಧಾರಣೆಗೆ ಎಲ್ಲ ನ್ಯೂನ್ಯತೆಗಳನ್ನು ಸರಿಪಡಿಸಬೇಕು. ಪ್ರತಿ ವಾರ ಪರಿಶೀಲನಾ ಕ್ರಮಗಳನ್ನು ಕೈಗೊಳ್ಳಬೇಕು. ಪ್ರತಿ ಶಾಲೆಯಲ್ಲಿ ಮಕ್ಕಳ ಸಹಾಯವಾಣಿ 1098 ಬರೆಯಿಸಬೇಕು. ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳುವ ಮುಂಚೆ ಕಡ್ಡಾಯವಾಗಿ ಪೋಲಿಸ್ ವೇರಿಫಿಕೇಶನ್ ಆಗಬೇಕು ಎಂದು ಅವರು ಸೂಚಿಸಿದರು.

ಜಿಲ್ಲೆಯ ಶಾಲೆಗಳಲ್ಲಿ ಮಕ್ಕಳ ರಕ್ಷಣಾ ನೀತಿ -2016 ಅನುಷ್ಠಾನಗೊಳ್ಳಬೇಕು. ಅವಶ್ಯಕತೆ ಇರುವ ಶಾಲೆಗಳಿಗೆ ಜೆಜೆಎಮ್ ರಡಿ ಕುಡಿಯುವ ನೀರಿನ ಸೌಲಭ್ಯ, ಒಂದು ವಾರದೊಳಗೆ ಕಲ್ಪಿಸಬೇಕು. ಶಾಲಾ ಕೊಠಡಿಗಳ ದುರಸ್ತಿ ಹಾಗೂ ಶೌಚಾಲಯಗಳ ದುರಸ್ತಿ ಕಾರ್ಯ ತಕ್ಷಣ ಕೈಗೊಳ್ಳಲು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀ ತಿಪ್ಪಣ್ಣ ಶಿರಸಗಿ, ಡಿಡಿಪಿಐ ಚನ್ನಬಸಪ್ಪ ಮುಧೋಳ, ಡಿಸಿಪಿಓ ಸಾವಿತ್ರಿ, ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News