ಸಚಿವ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ ಖಂಡಿಸಿ, ಯಾದಗಿರಿಯಲ್ಲಿ ಅ.23 ರಂದು ಬೃಹತ್ ಪ್ರತಿಭಟನಾ ಮೆರವಣಿಗೆ
ಯಾದಗಿರಿ: ಸಚಿವ ಪ್ರಿಯಾಂಕ ಖರ್ಗೆ ಮತ್ತು ಅವರ ಕುಟುಂಬದ ವಿರುದ್ಧ ಜೀವ ಬೆದರಿಕೆ ಹಾಗೂ ಅವಾಚ್ಯ ನಿಂದನೆ ಮಾಡಿದ ಮನೋಭಾವದ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಈ ಘಟನೆಯನ್ನು ಖಂಡಿಸಲು ಯಾದಗಿರಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಆಯೋಜಿಸಲಾಗಿದೆ.
ಸಂವಿಧಾನ ರಕ್ಷಿಸಿ—ಪ್ರಜಾಪ್ರಭುತ್ವ ಉಳಿಸಿ ಎಂಬ ಘೋಷಣೆಗಳೊಂದಿಗೆ ನಡೆಯುವ ಈ ಮೆರವಣಿಗೆ ಅಕ್ಟೋಬರ್ 23 ರಂದು ಹಳೆ ಪ್ರವಾಸಿ ಮಂದಿರದಿಂದ ಪ್ರಾರಂಭಗೊಂಡು ಜಿಲ್ಲಾಧಿಕಾರಿಗಳ ಕಚೇರಿವರೆಗೆ ಸಾಗಲಿದೆ ಎಂದು ದಲಿತ ಸಂಘರ್ಷ ಸಮಿತಿ ಯಾದಗಿರಿ ಜಿಲ್ಲಾ ಸಂಚಾಲಕ ಮರೆಪ್ಪ ಚಟ್ಟೇರಕರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಪ್ರಿಯಾಂಕ್ ಖರ್ಗೆ ವಿರುದ್ಧ ನಡೆಯುತ್ತಿರುವ ನಿಂದನೆ ಹಾಗೂ ಬೆದರಿಕೆಗಳು ಸಂವಿಧಾನ ಮೌಲ್ಯಗಳಿಗೆ ವಿರುದ್ಧವಾಗಿವೆ. ಸಾಮಾಜಿಕ ಶಾಂತಿ ಕಾಪಾಡಲು ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆ ಉಳಿಸಲು ಪ್ರತಿಯೊಬ್ಬರೂ ಒಂದಾಗಿ ನಿಲ್ಲಬೇಕಿದೆ ಎಂದು ಕರೆ ನೀಡಿದರು.
ಈ ಹೋರಾಟದಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ವಿದ್ಯಾರ್ಥಿ ಯುವಕರು ಹಾಗೂ ಪ್ರಗತಿಪರ ಚಿಂತಕರು ಭಾಗವಹಿಸಿ ಪ್ರತಿಭಟನೆ ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು.