×
Ad

ಒಳಮೀಸಲಾತಿ ರೋಸ್ಟರ್ ಲೋಪ ಖಂಡಿಸಿ ಯಾದಗಿರಿಯಲ್ಲಿ ಪ್ರತಿಭಟನೆ

Update: 2026-07-16 21:48 IST

ಯಾದಗಿರಿ: ಒಳಮೀಸಲಾತಿ ರೋಸ್ಟರ್ ಬಿಂದುಗಳ ಹಂಚಿಕೆಯಲ್ಲಿ ಆಗಿರುವ ವ್ಯತ್ಯಾಸಗಳನ್ನು ಖಂಡಿಸಿ ಹಾಗೂ ಲಂಬಾಣಿ, ಭೋವಿ, ಕೊರಚ ಮತ್ತು ಕೊರಮ ಸಮುದಾಯಗಳಿಗೆ ಆಗಿರುವ ಅನ್ಯಾಯವನ್ನು ವಿರೋಧಿಸಿ ಗುರುವಾರ ನಗರದ ಸುಭಾಷ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಆಲ್ ಇಂಡಿಯಾ ಬಂಜಾರ ಸೇವಾ ಸಂಘ, ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘ, ವಿದ್ಯಾರ್ಥಿಗಳ ಸಮೂಹ ಹಾಗೂ ಭೋವಿ, ಕೊರಮ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, ಪ್ರಸ್ತುತ ಜಾರಿಯಲ್ಲಿರುವ ಒಳಮೀಸಲಾತಿ ರೋಸ್ಟರ್ ಪದ್ಧತಿ ಅವೈಜ್ಞಾನಿಕವಾಗಿದ್ದು, ಲಂಬಾಣಿ, ಭೋವಿ, ಕೊರಚ ಹಾಗೂ ಕೊರಮ ಸಮುದಾಯಗಳಿಗೆ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.

ವಿವಿಧ ಇಲಾಖೆಗಳ ಗ್ರೂಪ್-ಸಿ ಹುದ್ದೆಗಳ ನೇಮಕಾತಿಯಲ್ಲಿ ರೋಸ್ಟರ್ ಲೋಪದೋಷಗಳಿಂದ ಸಮುದಾಯಗಳಿಗೆ ದೊರೆಯಬೇಕಾದ ಅವಕಾಶಗಳು ಕೈತಪ್ಪುತ್ತಿವೆ. ಶಾಲೆ ಹಾಗೂ ಕಾಲೇಜುಗಳ ಪ್ರವೇಶಾತಿಯಲ್ಲಿಯೂ ವಿದ್ಯಾರ್ಥಿಗಳು ತಾರತಮ್ಯಕ್ಕೆ ಒಳಗಾಗುತ್ತಿದ್ದು, ಉನ್ನತ ಶಿಕ್ಷಣದ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂದು ದೂರಿದರು.

ಪ್ರಸ್ತುತ ರೋಸ್ಟರ್ ವ್ಯವಸ್ಥೆಯನ್ನು ತಕ್ಷಣ ರದ್ದುಪಡಿಸಿ, ಸಮುದಾಯಗಳ ಜನಸಂಖ್ಯೆಗೆ ಅನುಗುಣವಾದ ವೈಜ್ಞಾನಿಕ ಮತ್ತು ನ್ಯಾಯಸಮ್ಮತ ರೋಸ್ಟರ್ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಈ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಅನ್ಯಾಯಕ್ಕೊಳಗಾದ ಸಮುದಾಯಗಳು ಒಗ್ಗೂಡಿ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಎಸಿಡಿ ರಮೇಶ್ ಕೋಲಾರ್ ಅವರಿಗೆ ಸಮಾಜದ ಮುಖಂಡರು ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಎಎಬಿಎಸ್ಎಸ್ ರಾಜ್ಯಾಧ್ಯಕ್ಷ ದೇವರಾಜ ನಾಯಕ, ಜಿಲ್ಲಾಧ್ಯಕ್ಷ ವಿನೋದ ನಾಯಕ, ಜನಾರ್ಧನ ರಾಠೋಡ್, ಸುರೇಶ್ ರಾಠೋಡ್, ಬಂಗಾರು ರಾಠೋಡ್, ಮನೋಹರ ಪವಾರ, ಬಸವರಾಜ ಮುದ್ದಾಳ, ನಾಗಪ್ಪ ಬೆನಕಲ್, ಮೇಘನಾಥ ಚವ್ಹಾಣ, ರವಿ ಮುದ್ದಾಳ, ಯಂಕಪ್ಪ ರಾಠೋಡ್, ಗೋಪಾಲ ಗೌಡಗೇರಾ, ರಮೇಶ್ ಚವ್ಹಾಣ, ಗೋವಿಂದ ವಡ್ಡಳ್ಳಿ, ವಾಚು ನಾಯಕ, ವಿಜಯ ಚಾಧವ್, ಜಯೇಂದ್ರ ಆನಂದ ಚವ್ಹಾಣ, ಬಲದೇವ ನಾಯಕ ಸೇರಿದಂತೆ ಹಲವರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News