ಯಾದಗಿರಿ: ಒಳಮೀಸಲಾತಿ ವರದಿ ಖಂಡಿಸಿ ಆ.14 ರಂದು ಬಲಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ
ಯಾದಗಿರಿ: ಒಳಮೀಸಲಾತಿ ಜಾರಿಗೊಳಿಸಲು ನ್ಯಾ. ನಾಗಮೋಹನದಾಸ್ ಸಮಿತಿಯು ಸಲ್ಲಿಸಿದ ವರದಿಯನ್ನು ವಿರೋಧಿಸಿ ಬಲಗೈ ಸಮುದಾಯದಿಂದ ಇದೇ ಆ.14 ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ದಲಿತ ಸಮುದಾಯದ ಮುಖಂಡರು ಮುಂದಾಗಿದ್ದಾರೆ.
ಬುಧವಾರ ನಗರದ ಹಳೆ ಪ್ರವಾಸ ಮಂದಿರದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ದಲಿತ ಬಲಗೈ ಸಮುದಾಯದ ಮುಖಂಡರು ಒಳಮೀಸಲಾತಿಗೆ ಸಂಬಂಧಿಸಿದ ನ್ಯಾ.ನಾಗಮೋಹನದಾಸ್ ಅವರ ವರದಿಯಲ್ಲಿ ಬಲಗೈ ಸಮುದಾಯಕ್ಕೆ ಉದ್ದೇಶಪೂರ್ವಕವಾಗಿ ಅನ್ಯಾಯ ಮಾಡಲಾಗಿದ್ದು. ಬಲಗೈ ಸಮುದಾಯ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ನೀಡಿರುವುದಿಲ್ಲ. ಇದರಿಂದಾಗಿ ನಮ್ಮ ಸಮುದಾಯದ ಭವಿಷ್ಯದ ಪೀಳಿಗೆಗೆ ತುಂಬಾ ತೊಂದರೆಯಾಗಲಿದೆ. ಇದರಿಂದಾಗಿ ನಾವು ಈ ವರದಿ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದು, ಇದನ್ನು ಜಾರಿಯಾಗಲು ಬಿಡುವುದಿಲ್ಲ ಎಂದು ಬಲಗೈ ಸಮುದಾಯದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಆ.14 ರ ಬೆಳಿಗ್ಗೆ 11 ಗಂಟೆಗೆ ನಗರದ ಅಂಬೇಡ್ಕರ್ ನಗರದಿಂದ ಸುಭಾಷ್ ವೃತ್ತದವರೆಗೆ ಬೃಹತ್ ಪ್ರತಿಭಟನೆಯನ್ನು ಮಾಡಿ, ಇಲ್ಲಿ ಬಹಿರಂಗ ಸಭೆ ಮಾಡಿ, ಯಾದಗಿರಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ನೀಡಲಾಗುತ್ತದೆ ಈ ಒಂದು ಪ್ರತಿಭಟನೆಯಲ್ಲಿ ಯಾದಗಿರಿ ಜಿಲ್ಲೆಯ ಸಮಸ್ತ ಬಲಗೈ ಸಮುದಾಯದ ಮುಖಂಡರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಲಗೈ ಸಮುದಾಯಗಳ ಒಳ ಮೀಸಲಾತಿ ಹೋರಾಟ ಸಮಿತಿಯ ಮರೆಪ್ಪ ಚಟ್ಟೇರಕರ್, ನೀಲಕಂಠ ಬಡಿಗೇರ, ಶಿವುಪುತ್ರ ಜವಳಿ, ಮಹಾದೇವ ದಿಗ್ವಿ, ಗಾಳೆಪ್ಪ ಪೂಜಾರಿ, ರಾಯಪ್ಪ ಸಾಲಿಮನಿ, ಸೈದಪ್ಪ ಕೂಯಿಲೂರ್, ಮಲ್ಲಿಕಾರ್ಜುನ ಕುರಕುಂಬಳಕರ್, ಪ್ರಭು ಬುಕ್ಕಲ್, ಡಾ. ಭಗವಂತ ಅನವಾರ, ಶರಣು ಎಸ್ ನಾಟೇಕಾರ್, ಕಾಶಿನಾಥ ನಾಟೇಕಾರ್, ಸೇರಿದಂತೆ ಅನೇಕ ದಲಿತ ಮುಖಂಡರು ಇದ್ದರು.