ಯಾದಗಿರಿಯಲ್ಲಿ ರಾಜಧಾನಿ ಎಕ್ಸ್ ಪ್ರೆಸ್ ರೈಲು ನಿಲುಗಡೆ ಮುಂದುವರಿಕೆ
ಸಾಂದರ್ಭಿಕ ಚಿತ್ರ
ಬೆಂಗಳೂರು, ಜು.22: ಯಾದಗಿರಿ ನಿಲ್ದಾಣದಲ್ಲಿ ರಾಜಧಾನಿ ಎಕ್ಸ್ ಪ್ರೆಸ್ ರೈಲುಗಳ ಪ್ರಾಯೋಗಿಕ ನಿಲುಗಡೆಯನ್ನು ಮುಂದಿನ ಆರು ತಿಂಗಳ ಅವಧಿಗೆ ಮುಂದುವರಿಸುವುದಾಗಿ ದಕ್ಷಿಣ ಮಧ್ಯ ರೈಲ್ವೆಯು ತಿಳಿಸಿದೆ.
ಇದರಂತೆ, ರೈಲು ಸಂಖ್ಯೆ 22691 ಕೆಎಸ್‍ಆರ್ ಬೆಂಗಳೂರು-ಹಝ್ರತ್ ನಿಝಾಮುದ್ದೀನ್ ರಾಜಧಾನಿ ಡೈಲಿ ಎಕ್ಸ್ ಪ್ರೆಸ್ ಜು.27ರಿಂದ ತನ್ನ ಯಾದಗಿರಿ ನಿಲ್ದಾಣದ ನಿಲುಗಡೆಯನ್ನು ಮುಂದುವರಿಸಲಿದೆ. ಹಾಗೆಯೇ, ರೈಲು ಸಂಖ್ಯೆ 22692 ಹಝ್ರತ್ ನಿಝಾಮುದ್ದೀನ್- ಕೆಎಸ್‍ಆರ್ ಬೆಂಗಳೂರು ರಾಜಧಾನಿ ಡೈಲಿ ಎಕ್ಸ್ ಪ್ರೆಸ್ ಜು.26ರಿಂದ ಯಾದಗಿರಿಯಲ್ಲಿ ತನ್ನ ನಿಲುಗಡೆಯನ್ನು ಮುಂದುವರಿಸಲಿದೆ.
ಈ ಪ್ರಾಯೋಗಿಕ ನಿಲುಗಡೆಯ ಮುಂದುವರಿಕೆಯು ಯಾದಗಿರಿ ಮತ್ತು ಸುತ್ತಮುತ್ತಲಿನ ಪ್ರಯಾಣಿಕರಿಗೆ ಅನುಕೂಲವಾಗಲಿದ್ದು, ದಿಲ್ಲಿ ಮತ್ತು ಬೆಂಗಳೂರಿನಂತಹ ಪ್ರಮುಖ ನಗರಗಳಿಗೆ ಸಂಪರ್ಕ ಮತ್ತಷ್ಟು ಸುಗಮವಾಗಲಿದೆ.
ಸಮಯ ಪರಿಷ್ಕರಣೆ :
ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣಗಳ ನಡುವೆ ಸಂಚರಿಸುವ ದ್ವಿ-ಸಾಪ್ತಾಹಿಕ ಎಕ್ಸ್ ಪ್ರೆಸ್ (ರೈಲು ಸಂಖ್ಯೆ 17313) ರೈಲಿನ ಗುಂತಕಲ್ ನಿಲ್ದಾಣದ ಆಗಮನ ಮತ್ತು ನಿರ್ಗಮನ ಸಮಯವನ್ನು ದಕ್ಷಿಣ ಮಧ್ಯ ರೈಲ್ವೆಯು ಪರಿಷ್ಕರಿಸಿದೆ.
ಈ ರೈಲು, ಇದುವರೆಗೆ ಗುಂತಕಲ್ ನಿಲ್ದಾಣಕ್ಕೆ ಬೆಳಗಿನ ಜಾವ 3 ಗಂಟೆಗೆ ಆಗಮಿಸಿ, 3:05ಕ್ಕೆ ನಿರ್ಗಮಿಸುತ್ತಿತ್ತು. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಜು.25 ರಿಂದ ಪ್ರಾರಂಭವಾಗುವ ಪ್ರಯಾಣದಿಂದ, ಈ ರೈಲು ಗುಂತಕಲ್ ನಿಲ್ದಾಣಕ್ಕೆ ಬೆಳಗಿನ ಜಾವ 3:05ಕ್ಕೆ ಆಗಮಿಸಿ, 3:10ಕ್ಕೆ ನಿರ್ಗಮಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.