ಯಾದಗಿರಿಯಿಂದ ಬೀರನಾಳ ಗ್ರಾಮಕ್ಕೆ ಹೋಗುವ ರಸ್ತೆ ಮರು ನಿರ್ಮಾಣ: ಜಿಪಂ ಸಿಇಒ
‘ವಾರ್ತಾಭಾರತಿ’ ವರದಿ ಫಲಶ್ರುತಿ
ಬೆಂಗಳೂರು: ಯಾದಗಿರಿ ಜಿಲ್ಲೆಯಿಂದ ಬೀರನಾಳ ಗ್ರಾಮಕ್ಕೆ ಹೋಗುವ ರಸ್ತೆಯನ್ನು ಶಾಸಕರ ಗಮನಕ್ಕೆ ತಂದು ಮುಂದಿನ ಯಾವುದಾದರೂ ಯೋಜನೆಯಲ್ಲಿ ಮರು ನಿರ್ಮಾಣ ಕೈಗೊಳ್ಳಲಾಗುವುದು ಎಂದು ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಿಳಿಸಿದ್ದಾರೆ.
‘ವಾರ್ತಾಭಾರತಿ’ ಪತ್ರಿಕೆಯಲ್ಲಿ ಆ.9ರಂದು ‘ರಸ್ತೆ ತುಂಬಾ ಗುಂಡಿಗಳು: ವಾಹನ ಸವಾರರ ನಿತ್ಯ ಪರದಾಟ’ ಎನ್ನುವ ಶೀರ್ಷಿಕೆಯಡಿಯಲ್ಲಿ ಪ್ರಕಟಗೊಂಡಿದ್ದ ವರದಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ವೈಷ್ಣವಿ ಅವರು ಯಾದಗಿರಿ ಜಿಲ್ಲೆಯಿಂದ ಬೀರನಾಳ ಗ್ರಾಮಕ್ಕೆ ಹೋಗುವ ರಸ್ತೆಯ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ವರದಿ ಕೇಳಿ ನೀರ್ದೇಶನ ನೀಡಿದ್ದರು. ಅದರಂತೆ ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ಪತ್ರಿಕೆಯಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಬೀರನಾಳ ರಸ್ತೆಯನ್ನು ಕಾರ್ಯಪಾಲಕ ಅಭಿಯಂತರರು ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ಪರಿಶೀಲಿಸಿದಾಗ ರಸ್ತೆಯು 2 ಕಿ.ಮೀ ಇದ್ದು, ರಸ್ತೆ ಸಂಪೂರ್ಣ ಹಾಳಾಗಿ, ಮರು ನಿರ್ಮಾಣದ ಅಗತ್ಯವಿದೆ ಎಂದು ವರದಿ ನೀಡಿದ್ದು, ಶಾಸಕರ ಗಮನಕ್ಕೆ ತಂದು ರಸ್ತೆಯ ಮರು ನಿರ್ಮಾಣವನ್ನು ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.