ಹೊಸಪೇಟೆಯಲ್ಲಿ ಮೇ 20ರಂದು ರಾಜ್ಯ ಸರ್ಕಾರದ ಸಾಧನಾ ಸಮಾವೇಶ
ಯಾದಗಿರಿ : ಮೇ 20 ರಂದು ಹೊಸಪೇಟೆಯಲ್ಲಿ ಏರ್ಪಡಿಸಲಾಗುವ ರಾಜ್ಯ ಸರ್ಕಾರದ ಎರಡು ವರ್ಷದ ಸಾಧನಾ ಸಮಾವೇಶದಲ್ಲಿ ಸುಮಾರು 1ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಯ ಉದ್ದೇಶ ಹೊಂದಲಾಗಿದೆ ಎಂದು ಪೌರಾಡಳಿತ, ಹಜ್ ಖಾತೆ ಸಚಿವರಾದ ರಹೀಂ ಖಾನ್ ಅವರು ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಹೊಸಪೇಟೆಯಲ್ಲಿ ಆಯೋಜಿಸಲು ಉದ್ದೇಶಿಸಲಾಗಿರುವ ಸರ್ಕಾರದ ಸಾಧನಾ ಸಮಾವೇಶದ ಸಿದ್ಧತೆ ಮತ್ತು ಫಲಾನುಭವಿಗಳಿಗೆ ಕಳುಹಿಸುವ ಕುರಿತಂತೆ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಸಮಾವೇಶಕ್ಕೆ ಫಲಾನುಭವಿಗಳ ಮೇಲುಸ್ತುವಾರಿ ನೋಡಿಕೊಳ್ಳಲು ಸರ್ಕಾರ ತಾಲೂಕುವಾರು ಸಚಿವರನ್ನು ನಿಯೋಜಿಸಿದ್ದರು, ಅದರನ್ವಯ ಯಾದಗಿರಿ ಹಾಗೂ ಗುರುಮಠಕಲ್ ಗೆ ತಾವು ಭೇಟಿ ನೀಡಿದ್ದು, ಜಿಲ್ಲೆಯ 21 ಗ್ರಾಮಗಳ ಸುಮಾರು 4,653 ಫಲಾನುಭವಿಗಳ ಪೈಕಿ 1,500 ಫಲಾನುಭವಿಗಳನ್ನು ತಾತ್ಕಾಲಿಕವಾಗಿ ಹಕ್ಕುಪತ್ರ ವಿತರಿಸುವ ಉದ್ದೇಶ ಹೊಂದಲಾಗಿದೆ. ನಂತರ ಉಳಿದ ಹಕ್ಕುಪತ್ರಗಳನ್ನು ಆಯಾ ಶಾಸಕರಿಂದ ವಿತರಣೆಯಾಗಲಿದೆ ಎಂದು ಹೇಳಿದರು.
ಹಟ್ಟಿ, ಹಾಡಿ, ತಾಂಡಾ, ಕ್ಯಾಂಪ್, ಕಾಲನಿ, ಮಜಿರೆಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿ, ವಿವಿಧ ಜಿಲ್ಲೆಗಳ 1 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಈ ಸಮಾವೇಶದಲ್ಲಿ ಹಕ್ಕುಪತ್ರ ವಿತರಣೆ ಮಾಡಲಾಗುವುದು ಎಂದು ಹೇಳಿದರು.
ಬಿ-ಖಾತಾ ವಿತರಣೆಗೆ ಹೊಸ ಆದೇಶ :
ರಾಜ್ಯದ ಮಹಾನಗರ ಪಾಲಿಕೆ ಹಾಗೂ ನಗರಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆ ಮತ್ತು ಮನೆ ನಿವೇಶನ ಹೊಂದಿದವರಿಗೆ ಸರ್ಕಾರವು ಬಿ ಖಾತಾ ವಿತರಣೆಗೆ ಸಂಬಂಧಿಸಿದಂತೆ ಈಗಾಗಲೇ ಮುಂದಿನ ಮೂರು ತಿಂಗಳ ಕಾಲಾವಕಾಶ ನೀಡಿ ಆದೇಶಿಸಿದೆ ಎಂದು ತಿಳಿಸಿದ ಸಚಿವ ರಹೀಂ ಖಾನ್ ಅವರು, ಮುಂಬರುವ 15 ದಿನಗಳಲ್ಲಿ ಈ ಕುರಿತು ಹೊಸ ಆದೇಶ ಹೊರಬೀಳಲಿದೆ ಎಂದು ಹೇಳಿದರು.
ಈಗಾಗಲೇ ಇರುವ ನಿಯಮಾವಳಿಯಂತೆ ರಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಯಾದ ಆಸ್ತಿಗಳಿಗೆ ಮಾತ್ರ ಬಿ-ಖಾತಾ ನೀಡಲಾಗುತ್ತಿದೆ. ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ವಿದ್ಯುತ್ ಬಿಲ್ ಪಾವತಿ ಆಧಾರ, ನೋಟರಿ ಸೇರಿದಂತೆ ಇನ್ನಿತರ ಆಧಾರದ ಮೇಲೆ ಒಂದೇ ಅವಧಿಯಲ್ಲಿ ಸಮಸ್ಯೆ ಪರಿಹರಿಸಲು ನೂತನ ಸರ್ಕಾರಿ ಆದೇಶವನ್ನು ಮುಂಬರುವ 15 ದಿನಗಳಲ್ಲಿ ಹೊರಡಿಸಲಾಗುವುದು ಎಂದು ಸಚಿವರು ಹೇಳಿದರು.
ಸಭೆಯಲ್ಲಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ನಗರಸಭೆ ಅಧ್ಯಕ್ಷ ಲಲಿತಾ ಅನಪುರ, ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.