×
Ad

ಸುರಪುರ | ಸಮುದಾಯ ಪೊಲೀಸ್ ವ್ಯವಸ್ಥೆ ಬಲಪಡಿಸಲು ಮನೆ ಮನೆಗೆ ಪೊಲೀಸ್ : ಡಿವೈಎಸ್ಪಿ ಜಾವಿದ್

Update: 2025-07-19 19:55 IST

ಸುರಪುರ: ಸಮುದಾಯ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವ ಹಿತದೃಷ್ಠಿಯಿಂದ ಮನೆ ಮನೆಗೆ ಪೊಲೀಸ್ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸಲು ಪೊಲೀಸ್ ಇಲಾಖೆ ಮುಂದಾಗಿದೆ ಎಂದು ಡಿವೈಎಸ್ಪಿ ಜಾವಿದ್ ಇನಾಂದಾರ್ ತಿಳಿಸಿದರು.

ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮುಖ್ಯಮಂತ್ರಿಗಳು ಮತ್ತು ಗೃಹ ಮಂತ್ರಿಗಳು ಉನ್ನತ ಮಟ್ಟದ ಸಭೆ ನಡೆಸಿ ಮನೆ ಮನೆಗೆ ಪೊಲೀಸ್ ಪರಿಕಲ್ಪನೆ ಅನುಷ್ಠಾನಗೊಳಿಸಲು ಸೂಚಿಸಿದ್ದಾರೆ. ಅದರಂತೆ ನಮ್ಮ ಕಚೇರಿ ವ್ಯಾಪ್ತಿಯ ಉಪ ವಿಭಾಗದ ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ಈ ಅಭಿಯಾನ ಆರಂಭಿಸಲಾಗಿದ್ದು, ಇದರ ಮೂಲಕ ಒಟ್ಟು 27 ಅಂಶಗಳು ಇದರಲ್ಲಿ ಒಳಗೊಂಡಿದ್ದು, ಅವುಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.

ಪೊಲೀಸ್ ಸಾರ್ವಜನಿಕ ಸ್ನೇಹಿಯಾಗಿಸಿಕೊಳ್ಳುವುದು ಇದರ ಮುಖ್ಯ ಉದ್ದೇಶವಾಗಿದೆ. ಪ್ರತಿಗ್ರಾಮಗಳಲ್ಲಿ ಇಂತಿಷ್ಟು ಮನೆಗಳಿಗೆ ಒಂದು ಸಮೂಹ ಮಾಡಿ ಅದಕ್ಕೆ ಒಬ್ಬರು ಮುಖಂಡರನ್ನು ನೇಮಕಗೊಳಿಸಿ ಬೀಟ್ ಪೊಲೀಸರಿಗೆ ಅಲ್ಲಿಯ ಯಾವುದೇ ಘಟನೆ ಕುರಿತು ಮಾಹಿತಿ ನೀಡಬೇಕು. ಎಲ್ಲಿಯಾದರು ಅಕ್ರಮ ಚಟುವಟಿಕೆಗಳು ನಡೆದಲ್ಲಿ ಮಾಹಿತಿ ನೀಡಬೇಕು. ಮಾಹಿತಿ ನೀಡಿದವರ ಹೆಸರು ಗೌಪ್ಯವಾಗಿಡಲಾಗುವುದು. ಮಹಿಳೆಯರ ಮೇಲೆ ನಡೆಯುವ ಶೋಷಣೆಯನ್ನು ತಡೆಗಟ್ಟುವುದು, ಸೈಬರ್ ಅಪರಾಧಗಳನ್ನು ತಡೆಗಟ್ಟಲು, ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆಗೆ ಕಡಿವಾಣ ಹಾಕುವುದು ಇದರ ಉದ್ದೇಶವಾಗಿದೆ. ಅಕ್ರಮ ಕಂಡು ಬಂದಲ್ಲಿ ನಮ್ಮ ಟೋಲ್ ಫ್ರೀ ನಂಬರ್‌ಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಸುರಪುರ ಠಾಣೆ ಪಿ.ಐ ಉಮೇಶ ನಾಯಕ, ಶಹಾಪುರ ಗ್ರಾ.ಠಾಣೆ ಸಿಪಿಐ ಶಿವನಗೌಡ ನ್ಯಾಮಣ್ಣವರ್, ಶಹಾಪುರ ಠಾಣೆ ಪಿ.ಐ ಎಸ್.ಎಮ್ ಪಾಟೀಲ್, ಪಿಎಸ್‌ಐಗಳಾದ ಕೃಷ್ಣಾ ಸುಬೇದಾರ, ಸಿದ್ದಣ್ಣ ಯಡ್ರಾಮಿ, ಶಿವರಾಜ ಪಾಟೀಲ್, ಶರಣಪ್ಪ ಹವಲ್ದಾರ್, ಮಹಾಂತೇಶ, ರಾಜಶೇಖರ ರಾಠೋಡ್ ಇತರರು ಉಪಸ್ಥಿತರಿದ್ದರು.

ಸಮುದಾಯದ ಪ್ರಮುಖ ಸ್ಥಳಗಳಲ್ಲಿ ಎನ್.ಜಿ.ಒ ಮುಖ್ಯಸ್ಥರನ್ನು ಪ್ರೇರೇಪಿಸಿ ತಮ್ಮ ಪ್ರದೇಶಗಳ ವ್ಯಾಪ್ತಿಯಲ್ಲಿ ಮತ್ತು ವಾಣಿಜ್ಯ ವ್ಯಾಪಾರ ಕೇಂದ್ರಗಳಲ್ಲಿ ಹಾಗೂ ಸ್ಥಳಿಯ ಪೌರಾಡಳಿತ ಇಲಾಖೆಯಿಂದ ಸಿಸಿ ಕ್ಯಾಮೆರಾಗಳ ಅಳವಡಿಸುವಂತೆ ಕೊರುತ್ತೇವೆ.

-ಜಾವಿದ್ ಇನಾಂದಾರ್ ಡಿವೈಎಸ್ಪಿ ಸುರಪುರ ಉ.ವಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News