ಸುರಪುರ | ರಸಗೊಬ್ಬರಕ್ಕಾಗಿ ರೈತರಿಂದ ರಸ್ತೆ ತಡೆದು ಪ್ರತಿಭಟನೆ
ಸುರಪುರ: ರಸಗೊಬ್ಬರ ನೀಡುವಂತೆ ಆಗ್ರಹಿಸಿ ರೈತರು ನಗರದ ಹಸನಾಪುರ ಪೆಟ್ರೋಲ್ ಬಂಕ್ ಬಳಿಯ ಎಪಿಎಂಸಿ ಗಂಜ್‌ನಲ್ಲಿಯ ಕೃಷಿ ಒಕ್ಕಲುತನ ಹುಟ್ಟುವಳಿ ಮಾರಾಟಗಾರರ ಸಹಕಾರ ಸಂಘದ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಎಲ್ಲ ರೈತರು ರಸಗೊಬ್ಬರ ನೀಡುವಂತೆ ಕಚೇರಿ ಸಿಬ್ಬಂದಿ ಜೊತೆಗೆ ವಾಗ್ವಾದ ನಡೆಸಿದರು. ಆದರೆ, ರಸಗೊಬ್ಬರ ದಾಸ್ತಾನು ಇಲ್ಲ ಸ್ವಲ್ಪ ಸಮಯದ ನಂತರ ಬರಲಿದೆ ಕೊಡುವುದಾಗಿ ತಿಳಿಸಿದರೂ, ರೈತರು ಸಮಾಧಾನಗೊಳ್ಳದೆ ಆಕ್ರೋಶ ವ್ಯಕ್ತಪಡಿಸಿದರು. ಸ್ವಲ್ಪ ಸಮಯಕಾದ ರೈತರು ನಂತರ ಬೇಸತ್ತು ಗಂಜ್ ದ್ವಾರದ ಮುಂಭಾಗದ ಬೀದರ-ಶ್ರೀರಂಗಪಟ್ಟಣ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ರೈತರ ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಸುರಪುರ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಉಮೇಶ ನಾಯಕ್ ಭೇಟಿ ನೀಡಿ ಪ್ರತಿಭಟನಾ ನಿರತ ರೈತರ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ, ರೈತರು ರಸ್ತೆ ತಡೆ ಮುಂದುವರೆಸಿದರು. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ನಡೆದ ರಸ್ತೆ ತಡೆಯಿಂದ ವಾಹನ ಸವಾರರು ಪರದಾಡುವಂತಾಯಿತು.
ನಂತರ ರಸಗೊಬ್ಬರ ಲಾರಿ ಲೋಡ್ ಬಂದ ನಂತರ ರಸ್ತೆ ತಡೆ ನಿಲ್ಲಿಸಿದ ರೈತರು ರಸಗೊಬ್ಬರಕ್ಕಾಗಿ ಟಿಎಪಿಸಿಎಮ್‌ಎಸ್ ಕಚೇರಿ ಮುಂದೆ ನೂಕಾಟ ತಳ್ಳಾಟ ಆರಂಭವಾಯಿತು. ಪ್ರತಿಯೊಬ್ಬ ರೈತನಿಗೆ ಎರಡು ಚೀಲದಂತೆ ಯೂರಿಯಾ ಗೊಬ್ಬರ ವಿತರಿಸಲಾಯಿತು. ಸಂಜೆವರೆಗೂ ನಡೆದ ರಸಗೊಬ್ಬರ ವಿತರಣೆ ಸ್ಥಳಕ್ಕೆ ತಹಶೀಲ್ದಾರ್ ಹುಸೇನಸಾಬ್ ಎ.ಸರಕಾವಸ್ ಹಾಗೂ ಡಿವೈಎಸ್ಪಿ ಜಾವಿದ್ ಇನಾಂದಾರ್ ಭೇಟಿ ನೀಡಿ ವೀಕ್ಷಿಸಿದರು.
ಒಂದು ಸಾವಿರ ಚೀಲ ಯೂರಿಯಾ ಗೊಬ್ಬರ ಬಂದಿದ್ದು, ರೈತರಿಗೆ ವಿತರಿಸಲಾಗಿದೆ. ಇನ್ನೂ ಸ್ವಲ್ಪ ಗೊಬ್ಬರ ಉಳಿದಿದ್ದು, ರೈತರಿಗೆ ವಿತರಣೆ ಮಾಡಲಾಗುವುದು. ರೈತರು ದಾಸ್ತಾನು ಇಲ್ಲದಾಗ ಸಹಕರಿಸಬೇಕು. ರಸಗೊಬ್ಬರ ದಾಸ್ತಾನು ಬಂದಾಗ ರೈತರಿಗೆ ತೊಂದರೆಯಾಗದಂತೆ ಎಲ್ಲರಿಗೂ ಎರಡೆರಡು ಚೀಲದಂತೆ ವಿತರಣೆ ಮಾಡಲಾಗುವುದು.
-ಶಿವರುದ್ರ ಉಳ್ಳಿ ಟಿಎಪಿಸಿಎಮ್‌ಎಸ್ ಕಾರ್ಯದರ್ಶಿ