ಸುರಪುರ | ಸಾಹಿತ್ಯ ಸೇವೆಗೆ ಜಾವೀದ್ ಹುಸೇನ್ ಹವಲ್ದಾರ್‌ಗೆ ‘ಸಾಹಿತ್ಯ ರತ್ನ’ ಪ್ರಶಸ್ತಿ
ಸುರಪುರ: ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದಲ್ಲಿ ಸುವರ್ಣ ಕರ್ನಾಟಕ ಪ್ರೆಸ್ ಅಸೋಸಿಯೇಷನ್ ಹಾಗೂ ಕರ್ನಾಟಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ, ಬೆಂಗಳೂರು ವತಿಯಿಂದ ನೀಡಲಾಗುವ 2026ನೇ ಸಾಲಿನ ರಾಜ್ಯ ಮಟ್ಟದ ‘ಸಾಹಿತ್ಯ ರತ್ನ’ ಪ್ರಶಸ್ತಿಯನ್ನು ಸುರಪುರದ ಶಿಕ್ಷಕ ಹಾಗೂ ಸಾಹಿತಿ ಜಾವೀದ್ ಹುಸೇನ್ ಹವಲ್ದಾರ್ ಅವರಿಗೆ ಪ್ರದಾನ ಮಾಡಲಾಯಿತು.
ಸಾಹಿತ್ಯ ಕ್ಷೇತ್ರದಲ್ಲಿನ ಅವರ ಸೇವೆ ಹಾಗೂ ವಿವಿಧ ಸಾಧನೆಗಳನ್ನು ಪರಿಗಣಿಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಅಂಬಾ ದರ್ಶನ ಪೀಠದ ಪೀಠಾಧ್ಯಕ್ಷ ಪೂಜ್ಯ ಶ್ರೀ ನಾರಾಯಣ ಶರಣರು ಸಾನ್ನಿಧ್ಯ ವಹಿಸಿದ್ದರು. ಶಾಸಕ ರಮೇಶ್ ಜಾರಕಿಹೊಳಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಕಲಾವಿದ ಹಾಗೂ ಸಾಹಿತಿ ಡಾ. ಉದ್ದಣ್ಣ ಗೌಡ, ಸಿರಿಗನ್ನಡ ಮಹಿಳಾ ವೇದಿಕೆಯ ಅಧ್ಯಕ್ಷೆ ರಜನಿ ಅಶೋಕ ಜೀರಗ್ಯಾಳ, ಗೌರವಾಧ್ಯಕ್ಷೆ ಡಾ. ಮಂಜುಳಾ ಪಾವಗಡ, ಹಿರಿಯ ಸಾಹಿತಿ ಡಾ. ಸಿದ್ಧಣ್ಣ ಬಾಡಗಿ, ಮಾನವ ಹಕ್ಕುಗಳ ಆಯೋಗದ ರಾಷ್ಟ್ರೀಯ ಅಧ್ಯಕ್ಷ ಡಾ. ಪ್ರವೀಣ್ ಹಿರೇಮಠ, ಮಹೇಶ್ ಉಣ್ಣೆ, ಸುವರ್ಣ ಕರ್ನಾಟಕ ಪ್ರೆಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಡಾ. ರಾಜು ಮೋರೆ ಹಾಗೂ ವಿಶ್ವದಾಖಲೆ ಸಾಧಕ ಡಾ. ಲಕ್ಷ್ಮಣ ಎಸ್. ಚೌರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ಸುರಪುರ ಅರಸು ವಂಶಸ್ಥ ಡಾ. ರಾಜಾ ಕೃಷ್ಣಪ್ಪ ನಾಯಕ, ಶೆಟ್ಟಿ ಶಾಲೆಯ ಅಧ್ಯಕ್ಷ ತಿರುಪತಿ ಎನ್. ಶೆಟ್ಟಿ, ರಾಜೇಶ್ವರಿ ಟಿ. ಶೆಟ್ಟಿ, ಶಾಲೆಯ ಶಿಕ್ಷಕ ವೃಂದ ಹಾಗೂ ವಿವಿಧ ಗಣ್ಯರು ಜಾವೀದ್ ಹುಸೇನ್ ಹವಲ್ದಾರ್ ಅವರಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು.