ಸುರಪುರ | ರಂಗಂಪೇಟೆ ವೀರಶೈವ ಕಲ್ಯಾಣ ಮಂಟಪ ಬಳಿ ಬಸ್ ನಿಲುಗಡೆಗೆ ಮನವಿ
ಸುರಪುರ: ನಗರದ ರಂಗಂಪೇಟೆಯ ವೀರಶೈವ ಲಿಂಗಾಯತ ಕಲ್ಯಾಣ ಮಂಟಪದ ಬಳಿಯಲ್ಲಿ ಎಲ್ಲಾ ಬಸ್‌ಗಳ ನಿಲುಗಡೆಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ನಗರದ ಸಾರಿಗೆ ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಸಾಮಾಜಿಕ ಕಾರ್ಯಕರ್ತ ಸಚಿನಕುಮಾರ ನಾಯಕ, ರಂಗಪೇಟೆಯ ವೀರಶೈವ ಲಿಂಗಾಯತ ಕಲ್ಯಾಣ ಮಂಟಪದ ಸುತ್ತಮುತ್ತಲ ಪ್ರದೇಶದಲ್ಲಿ ಬಸವಪ್ರಭು ಮಹಾವಿದ್ಯಾಲಯ, ಕೆಪಿಎಸ್ ಶಾಲೆ ಹಾಗೂ ಕಾಲೇಜು, ಮೈಲಾರಲಿಂಗೇಶ್ವರ ಸ್ನಾತಕೋತ್ತರ ಮಹಾವಿದ್ಯಾಲಯ, ಅರುಂಧತಿ ಕಾನೂನು ಮಹಾವಿದ್ಯಾಲಯ, ಡಾ.ಬಿ.ಆರ್ ಅಂಬೇಡ್ಕರ್ ಪ್ರೌಢಶಾಲೆ, ಗುರುಕುಲ ಶಾಲೆ ಮತ್ತು ಕಾಲೇಜು, ಬಸವೇಶ್ವರ ಪ್ರಾಥಮಿಕ ಶಾಲೆ ಸೇರಿದಂತೆ ಇತರೆ ಶಿಕ್ಷಕರ ತರಬೇತಿ ಕೇಂದ್ರ, ಎಸ್.ಬಿ.ಐ ಬ್ಯಾಂಕ್ ಕೂಡ ಇಲ್ಲೆ ಇದ್ದು ವಿದ್ಯಾರ್ಥಿಗಳು ಸೇರಿದಂತೆ ನಿತ್ಯವೂ ನೂರಾರು ಜನರು ಈ ಸ್ಥಳಕ್ಕೆ ಬಂದು ಹೋಗುತ್ತಾರೆ. ಆದರೆ ಇಲ್ಲಿ ಯಾವುದೇ ಬಸ್‌ಗಳ ನಿಲುಗಡೆ ಇಲ್ಲದ್ದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ವೀರಶೈವ ಲಿಂಗಾಯತ ಕಲ್ಯಾಣ ಮಂಟಪದ ಬಳಿಯಲ್ಲಿ ಎಲ್ಲಾ ಬಸ್‌ಗಳ ನಿಲುಗಡೆಗೆ ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ವಿದ್ಯಾರ್ಥಿಗಳೊಂದಿಗೆ ಬಸ್ ಡಿಪೋ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಗುರುನಾಥರಡ್ಡಿ ಶೀಲವಂತ, ಲಕ್ಷ್ಮಿಶ ಪೂಜಾರಿ ಅರುಂಧತಿ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರು,ಮಲ್ಲಪ್ಪ ಉಪನ್ಯಾಸಕರು, ನವೀನಕುಮಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.