×
Ad

ಜಗತ್ತಿಗೆ ಬುದ್ಧನ ಬೋಧನೆ, ವಿಚಾರಗಳ ಅವಶ್ಯಕತೆ ಇದೆ : ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರ್

Update: 2025-05-12 17:19 IST

ಯಾದಗಿರಿ : ಲೋಕಕ್ಕೆ ಇವತ್ತಿನ ದಿನದಲ್ಲಿ ಬುದ್ಧನ ಬೋಧನೆಯ ಅವಶ್ಯಕತೆ ಇದೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು ಹೇಳಿದರು.

ನಗರದ ಸರಕಾರಿ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ಜಯಂತ್ಯೋತ್ಸವ ಸಮಿತಿ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಭಗವಾನ್ ಬುದ್ದ ಜಯಂತ್ಸೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದ್ವೇಷದ ಮಾರ್ಗದಲ್ಲಿ ನಡೆಯುವ ಮೂಲಕ ಇಂದು ಮಾನವ ಅಶಾಂತಿಯ ಸಾಗರದಲ್ಲಿ ಮುಳುಗಿದ್ದಾನೆ. ಈ ವೇಳೆ ಬೌದ್ಧ ಧರ್ಮದ ಪ್ರತಿಪಾದಕ ಗೌತಮ ಬುದ್ಧನ ಶಾಂತಿ ಸಂದೇಶಗಳು ಇಡೀ ಜಗತ್ತಿಗೆ ಬೇಕಾದ ಸಾರ್ವಕಾಲಿಕ ಸತ್ಯವೆಂದರು. ಭಾರತದಲ್ಲಿ ಹೊಸ ಚಿಂತನೆ, ಮನ್ವಂತರದ ಬೆಳಕು ಹೊಮ್ಮಿಸಿದ ಮೇರು ಪುರುಷ ಭಗವಾನ್ ಬುದ್ಧರು ಎಂದು ಶಾಸಕರು ಬಣ್ಣಿಸಿದರು.

ವಿಶೇಷ ಉಪನ್ಯಾಸ ‌ನೀಡಿದ ಹಿರಿಯ ದಲಿತ ನಾಯಕ ನೀಲಕಂಠ ಬಡಿಗೇರ ಶಹಾಪುರ, ಬುದ್ಧರಿಗೆ ಜ್ಞಾನೋದಯವಾದ ಸ್ಥಳ ಬಿಹಾರದ ಬುದ್ಧಗಯಾ. ಬೋಧಿವೃಕ್ಷದ ಕೆಳಗೆ ಕಠಿಣ ತಪಸ್ಸು ಮಾಡಿ ಜ್ಞಾನ ಸಂಪಾದಿಸಿಕೊಂಡು ಅಲ್ಲಿಂದ ವಾರಣಾಸಿಗೆ ತೆರಳಿ ಸಾರಾನಾಥ ಎಂಬ ಸ್ಥಳದಲ್ಲಿ ತನ್ನ ಶಿಷ್ಯರಿಗೆ ಬೌದ್ಧ ತತ್ವೋಪದೇಶ ಮಾಡಿದರು ಎಂದು ವಿವರಿಸಿದರು.

ನೆಮ್ಮದಿ ಜೀವನಕ್ಕೆ ಬೆಳಕಿನ ದಾರಿ ತೋರಿದ ಗೌತಮನನ್ನು ನೆನೆಯುವ ಈ ಪವಿತ್ರ ದಿನವೇ ಬುದ್ಧ ಪೌರ್ಣಮಿ ಎಂದು ಬಡಿಗೇರ ಹೇಳಿದರು.

ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಮಾತನಾಡಿ, ಗೌತಮ ಬುದ್ಧರು ತಮ್ಮಲ್ಲಿನ ಜ್ಞಾನವನ್ನು ಶ್ರೀಸಾಮಾನ್ಯರ ಭಾಷೆಯಲ್ಲಿಯೇ ಬೋಧಿಸಿದರು. ಭಾರತದ ಉದ್ಧಗಲಕ್ಕೂ ಸುಮಾರು 45 ವರ್ಷಗಳ ಕಾಲ ಸಂಚರಿಸಿ ನಾಲ್ಕು ಸತ್ಯಗಳನ್ನು, ಅಷ್ಟಾಂಗ ಮಾರ್ಗಗಳನ್ನು ಬೋದಿಸಿದರೆಂದು ತಿಳಿಸಿದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಯೂಡಾ ಅಧ್ಯಕ್ಷ ವಿನಾಯಕ ಮಾಲಿಪಾಟೀಲ್, ಭಗವಾನ ಬುದ್ದ ಜಯಂತ್ಸೋತ್ಸವ ಸಮಿತಿ ಅಧ್ಯಕ್ಷ ಡಾ.ಭಗವಂತ ಅನ್ವಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ ಇದ್ದರು.

ಜ್ಯೋತಿಲತಾ ತಡಿಬಿಡಿಮಠ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಆರಂಭದಲ್ಲಿ‌ ಡಾ.ಅಂಬೇಡ್ಕರ್ ಭವನದಿಂದ ಸರ್ಕಾರಿ ಪದವಿ ಮಹಾವಿದ್ಯಾಲಯದವರೆಗೆ ಬುದ್ಧರ ಭಾವಚಿತ್ರದ ಮೆರವಣಿಗೆ ನಡೆಯಿತು.ಕಾರ್ಯಕ್ರಮದಲ್ಲಿ ನೂರಾರು ಜನರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News