ಯಾದಗಿರಿ | ಡಿ.25 ರಂದು ವಡಿಗೇರಾದಲ್ಲಿ ಬೃಹತ್ ಆರೋಗ್ಯ, ನೇತ್ರ ತಪಾಸಣಾ ಶಿಬಿರ : ಭೀಮಣ್ಣಗೌಡ ಕ್ಯಾತ್ನಾಳ
ಯಾದಗಿರಿ.ಡಿ.21: ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ, ಮಾಜಿ ಮಂತ್ರಿ ದಿ.ವಿಶ್ವನಾಥರೆಡ್ಡಿ ಮುದ್ನಾಳ, ಮಾಜಿ ಶಾಸಕ ದಿ. ವೀರಬಸವಂತರೆಡ್ಡಿ ಮುದ್ನಾಳ ಜನ್ಮದಿನದ ಸವಿನೆನಪಿಗಾಗಿ ಡಿ.25 ರಂದು ವಡಿಗೇರಾ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಯಾದಗಿರಿ ಲಯನ್ಸ್ ಕ್ಲಬ್ ವತಿಯಿಂದ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 4:30 ರ ವರೆಗೆ ಉಚಿತ ಬೃಹತ್ ಆರೋಗ್ಯ ತಪಾಸಣೆ ಹಾಗೂ ನೇತ್ರ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಭೀಮಣ್ಣಗೌಡ ಕ್ಯಾತ್ನಾಳ ತಿಳಿಸಿದರು.
ಪತ್ರಿಕಾಭವನದಲ್ಲಿ ರವಿವಾರ ಹಮ್ಮಿಕೊಂಡಿದ್ದ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಲಯನ್ಸ್ ಕ್ಲಬ್ ಯಾದಗಿರಿ ಹಾಗೂ ವಿಬಿಆರ್ ಆಸ್ಪತ್ರೆ ಸಹಯೋಗದೊಂದಿಗೆ, ಕೋಡಾಲ ಹಾಗೂ ನೇರಡಗಂ ಮಠದ ಪೂಜ್ಯ ಪಂಚಮಸಿದ್ದಲಿಂಗ ಮಹಾಸ್ವಾಮಿಗಳು, ಸಂಗಮದ ಕರುಣೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯ ವಹಿಸಲಿದ್ದಾರೆ. ಅನೇಕ ತಜ್ಞ ವೈದ್ಯರು ರೋಗಿಗಳ ತಪಾಸಣೆ ಮಾಡಲಿದ್ದಾರೆ. ರೋಗಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.
ಲಯನ್ಸ್ ಕ್ಲಬ್ ಹಿರಿಯ ಸದಸ್ಯ ಹಾಗೂ ಉದ್ಯಮಿ ರಾಚನಗೌಡ ಮುದ್ನಾಳ ಮಾತನಾಡಿ, ಲಯನ್ಸ್ ಕ್ಲಬ್ ವತಿಯಿಂದ ಮುಂದಿನ ದಿನಗಳಲ್ಲಿ ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಯಿದೆ. ಶಿಬಿರದಲ್ಲಿ ನೇತ್ರ ತಪಾಸಣೆಗೆ ಒಳಗಾದವರಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದ್ದರೆ ಕ್ಲಬ್ ವತಿಯಿಂದ ಉಚಿತವಾಗಿ ಮಹಿಬೂಬನಗರದ ಲಯನ್ಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಚಿಕಿತ್ಸೆ ಮಾಡಿಸಲಾಗುವುದು. ಅವರ ಪ್ರಯಾಣ ವ್ಯವಸ್ಥೆ ಹಾಗೂ ಊಟೋಪಚಾರ ಹಾಗೂ ಇತರ ವೆಚ್ಚವನ್ನು ಕ್ಲಬ್ ವತಿಯಿಂದಲೇ ಭರಿಸಲಾಗುವುದು ಎಂದರು.
ಯಾದಗಿರಿ ನಗರದ ಪ್ರಸಿದ್ಧ ವಿಬಿಆರ್ ಆಸ್ಪತ್ರೆಯ ಡಾ.ಅಮೋಘಸಿದ್ಧೇಶ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಡಾ.ಶಿವಪುತ್ರರೆಡ್ಡಿ ಪಾಟೀಲ, ಲಯನ್ಸ್ ಕ್ಲಬ್ ಮಾಜಿ ಕಾರ್ಯದರ್ಶಿ ಡಾ.ಸಿದ್ಧರಾಜರೆಡ್ಡಿ ಮಾತನಾಡಿದರು.
ಸುದ್ಧಿಗೋಷ್ಠಿಯಲ್ಲಿ ಲಯನ್ಸ್ ಸದಸ್ಯರಾದ ಹೇಮಂತಕುಮಾರ ಕಶೆಟ್ಟಿ, ಸೋಮಶೇಖರ್ ಗಣಬೂರ, ಸೇರಿ ಹಲವರು ಉಪಸ್ಥಿತರಿದ್ದರು.