×
Ad

ಕೇಂದ್ರ ಬಜೆಟ್‌ನಲ್ಲಿ ಯಾದಗಿರಿಗೆ ವಿಶೇಷ ಪ್ಯಾಕೇಜ್ ಘೋಷಣೆಗೆ ಉಮೇಶ್ ಮುದ್ನಾಳ್ ಒತ್ತಾಯ

Update: 2026-01-31 23:43 IST

ಯಾದಗಿರಿ: ಜ.1ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್ ಮೇಲೆ ಯಾದಗಿರಿ ಜಿಲ್ಲೆಯ ಜನರು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಯಾದಗಿರಿ ಜಿಲ್ಲೆಗೆ ಕೇಂದ್ರ ಬಜೆಟ್‌ನಲ್ಲಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ಆಗ್ರಹಿಸಿದ್ದಾರೆ.

ಯಾದಗಿರಿ ಜಿಲ್ಲೆ ರೂಪುಗೊಂಡು 15 ವರ್ಷಗಳಾದರೂ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿ ಸಾಧಿಸಿಲ್ಲ. ಈ ಭಾಗದ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಆರೋಪಿಸಿದರು. ಕನಿಷ್ಠ ಈ ಬಾರಿ ಮಂಡನೆಯಾಗಲಿರುವ ಕೇಂದ್ರ ಬಜೆಟ್‌ನಲ್ಲಿ ಜಿಲ್ಲೆಯ ಇಬ್ಬರೂ ಸಂಸದರು ಜನರ ಪರವಾಗಿ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದರು.

ಗುಂತಕಲ್ ರೈಲು ನಿಲ್ದಾಣದ ಬಳಿಕ ಎರಡನೇ ಅತಿಹೆಚ್ಚು ಆದಾಯ ನೀಡುವ ಯಾದಗಿರಿ ರೈಲು ನಿಲ್ದಾಣ ಮಾರ್ಗವಾಗಿ ಸಂಚರಿಸುವ 12 ಎಕ್ಸ್‌ಪ್ರೆಸ್ ರೈಲುಗಳು ಇಲ್ಲಿ ನಿಲುಗಡೆ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಕೊರೊನಾ ಅವಧಿಯಲ್ಲಿ ರದ್ದಾದ ಇಂಟರ್‌ಸಿಟಿ ಪ್ಯಾಸೆಂಜರ್ ರೈಲನ್ನು ಮರು ಆರಂಭಿಸಬೇಕು ಹಾಗೂ ರೈಲು ನಿಲ್ದಾಣಕ್ಕೆ ಹೈಟೆಕ್ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ಯಾದಗಿರಿ ಜಿಲ್ಲೆಗೆ ಇಂಜಿನಿಯರಿಂಗ್ ಕಾಲೇಜು ಸ್ಥಾಪನೆ ಮಾಡಬೇಕು. ಉದ್ಯೋಗಾಕಾಂಕ್ಷಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಬೇಕೆಂದು ಹೇಳಿದರು.

ಇದಲ್ಲದೆ ರಾಜ್ಯದ ಬಹುತೇಕ ಹೆದ್ದಾರಿಗಳು ಸಂಪೂರ್ಣ ಹಾಳಾಗಿದ್ದು, ಕೂಡಲೇ ಹೆದ್ದಾರಿ ದುರಸ್ತಿ ಕಾರ್ಯಗಳಿಗೆ ಬಜೆಟ್‌ನಲ್ಲಿ ಅನುದಾನ ಒದಗಿಸಬೇಕೆಂದು ಉಮೇಶ್ ಮುದ್ನಾಳ್ ಒತ್ತಾಯಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News