ಯಾದಗಿರಿ | ದೇಶದಲ್ಲಿಯೇ ಕರ್ನಾಟಕದ ಶುಶ್ರೂಷಕರಿಗೆ ಹೆಚ್ಚಿನ ಬೇಡಿಕೆ: ಶ್ರೀಕಾಂತ ಪೂಲಾರಿ
ಯಾದಗಿರಿ : ಕೇರಳ ಸೇರಿದಂತೆ ಇತರ ರಾಜ್ಯಗಳ ನರ್ಸಿಂಗ್ ಸಿಬ್ಬಂದಿಗಳಿಗಿಂತ ಕರ್ನಾಟಕದ ನರ್ಸಿಂಗ್ ಪದವಿಧರರು ವೃತ್ತಿಯಲ್ಲಿ ಹೆಚ್ಚಿನ ನೈಪುಣ್ಯತೆ ಹೊಂದಿದ್ದಾರೆ. ಇದರಿಂದಾಗಿ ದೇಶ ಹಾಗೂ ವಿದೇಶಗಳಲ್ಲಿ ಅವರಿಗೆ ವಿಶೇಷ ಬೇಡಿಕೆ ಇದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆ (ನರ್ಸಿಂಗ್ ಶಿಕ್ಷಣ) ಸಹಾಯಕ ನಿರ್ದೇಶಕ ಶ್ರೀಕಾಂತ ಪೂಲಾರಿ ತಿಳಿಸಿದ್ದಾರೆ.
ನಗರದ ಸರ್ಕಾರಿ ಮೆಡಿಕಲ್ ಕಾಲೇಜಿನ ಸಭಾಂಗಣದಲ್ಲಿ ಯಾದಗಿರಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಯಿಮ್ಸ್) ಸರ್ಕಾರಿ ಶುಶ್ರೂಷಾ ಮಹಾವಿದ್ಯಾಲಯದ 2ನೇ ವರ್ಷದ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ದೀಪಧಾರೆ ಹಾಗೂ ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಪಾನ್, ಇಟಲಿ, ದುಬೈ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಕರ್ನಾಟಕದ ನರ್ಸಿಂಗ್ ಪದವಿಧರರಿಗೆ ಅಪಾರ ಉದ್ಯೋಗಾವಕಾಶಗಳಿದ್ದು, ವಿವಿಧ ದೇಶಗಳು ಸರ್ಕಾರದ ಮೂಲಕ ಅಧಿಕೃತ ಮನವಿ ಸಲ್ಲಿಸುತ್ತಿವೆ. ನರ್ಸಿಂಗ್ ಕೋರ್ಸ್ ಗ್ಯಾರಂಟಿ ಉದ್ಯೋಗ ನೀಡುವ ವೃತ್ತಿಪರ ಶಿಕ್ಷಣವಾಗಿದೆ ಎಂದು ಅವರು ಹೇಳಿದರು.
ವಿದೇಶಗಳಲ್ಲಿ ಉದ್ಯೋಗ ಪಡೆಯಲು ಭಾಷಾ ಜ್ಞಾನ ಅತ್ಯಗತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ವಿಶೇಷ ಹಣಕಾಸು ನೆರವಿನೊಂದಿಗೆ ಭಾಷಾ ತರಬೇತಿ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು ಲಭ್ಯವಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿ ಒಟ್ಟು 32 ಸರ್ಕಾರಿ ನರ್ಸಿಂಗ್ ಕಾಲೇಜುಗಳಿದ್ದು, ಪ್ರತಿವರ್ಷ ಸುಮಾರು 80 ಸಾವಿರ ವಿದ್ಯಾರ್ಥಿಗಳು ಪದವಿ ಪೂರ್ಣಗೊಳಿಸಿ ಸೇವೆಗೆ ಸೇರುತ್ತಿದ್ದಾರೆ. ಆದರೂ ನರ್ಸಿಂಗ್ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಿಬ್ಬಂದಿಯ ಅಗತ್ಯವಿದೆ ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೆಡಿಕಲ್ ಕಾಲೇಜಿನ ಡೀನ್ ಡಾ. ಸಂದೀಪ್ ವಿ.ಎಚ್., ವೈದ್ಯರು ಚಿಕಿತ್ಸೆ ನೀಡಿದ ನಂತರ ರೋಗಿಯ ಆರೈಕೆ ಮತ್ತು ಗುಣಮುಖತೆಯಲ್ಲಿ ನರ್ಸಿಂಗ್ ಸಿಬ್ಬಂದಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. ಯಾವುದೇ ಸಂಕೋಚವಿಲ್ಲದೆ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಉತ್ತಮ ಸೇವೆ ಸಲ್ಲಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಡಿಎಸ್ ಡಾ. ರಿಜ್ವಾನ್ ಆಫ್ರಿನ್, ಡಾ. ಪಂಪಾಪತಿರೆಡ್ಡಿ ಕೊಲ್ಲೂರ್, ಹಣಕಾಸು ಅಧಿಕಾರಿ ಕಾಶಿನಾಥ ಅಲ್ಲೂರ್, ಪ್ರಾಚಾರ್ಯ ಸಿದ್ದರಾಮಪ್ಪ ಸಜ್ಜನ್ ಮಾತನಾಡಿದರು.
ಮೆಡಿಕಲ್ ಅಧೀಕ್ಷಕ ಡಾ. ಸಂತೋಷ ಲಕ್ಷ್ಮಣ, ಡಾ. ಶಿವಕುಮಾರ, ಪ್ರಾಚಾರ್ಯೆ ಡಾ. ನವಾಜ್ ಉಮರ್, ಡಾ. ನಿರಂಜನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಉಪಪ್ರಾಚಾರ್ಯ ಬಸವರಾಜ ಬಿರಾದಾರ ಸ್ವಾಗತಿಸಿದರು. ದಿನಾ ಕಾರ್ಯಕ್ರಮ ನಿರೂಪಣೆ ಮಾಡಿದರು. ರಫೀಕ್ ವಂದಿಸಿದರು. ಇದೇ ವೇಳೆ ಮೊದಲ ವರ್ಷದ ಮೂವರು ಟಾಪರ್ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಎರಡನೇ ವರ್ಷದ 100 ವಿದ್ಯಾರ್ಥಿಗಳು ದೀಪಧಾರೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.