×
Ad

ಯಾದಗಿರಿ | ಎಂಎಸ್‌ಪಿ ಖಾತರಿ ಕಾನೂನು ಜಾರಿಗೆ ಆಗ್ರಹಿಸಿ ದೇಶಾದ್ಯಂತ ರೈತರಿಂದ ಸಹಿ ಸಂಗ್ರಹ ಅಭಿಯಾನ

Update: 2026-01-30 22:34 IST

ಯಾದಗಿರಿ : ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿ ಕಾನೂನು ಜಾರಿಗೆ ಒತ್ತಾಯಿಸಿ, ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ದೇಶಾದ್ಯಂತ ರೈತರಿಂದ ಸಹಿ ಸಂಗ್ರಹ ಅಭಿಯಾನ ಹಾಗೂ ರೈತ ಜಾಗೃತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ರಾಷ್ಟ್ರೀಯ ಸಹ ಸಂಚಾಲಕ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೆಹಲಿ ಗಡಿಯಲ್ಲಿ ರೈತರು ದೀರ್ಘಕಾಲ ಚಳುವಳಿ ನಡೆಸಿ ಸರ್ಕಾರದ ಗಮನ ಸೆಳೆದರೂ, ಎಂಎಸ್‌ಪಿ ಖಾತರಿ ಕುರಿತು ಸ್ಪಷ್ಟ ಕಾನೂನು ಜಾರಿಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ರೈತ ಮುಖಂಡ ಜಗಜಿತ್ ಸಿಂಗ್ ದಲೈವಾಲಾ ಅವರು 131 ದಿನಗಳ ಉಪವಾಸ ಸತ್ಯಾಗ್ರಹ ನಡೆಸಿದ್ದು, ಬಳಿಕ ಸರ್ವೋಚ್ಚ ನ್ಯಾಯಾಲಯದ ಸೂಚನೆಯ ಮೇರೆಗೆ ನಿವೃತ್ತ ನ್ಯಾಯಾಧೀಶ ನವಾಬ್ ಸಿಂಗ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿ ವರದಿ ಸಲ್ಲಿಸಲಾಗಿದೆ. ಆ ಸಮಿತಿಯು ಎಂಎಸ್‌ಪಿ ಖಾತರಿ ಕಾಯ್ದೆ ಅಗತ್ಯ ಎಂದು ಶಿಫಾರಸು ಮಾಡಿದೆ ಎಂದು ಹೇಳಿದರು.

ಇದಲ್ಲದೆ, ಕೃಷಿ ವಿಷಯಕ್ಕೆ ಸಂಬಂಧಿಸಿದ 31 ಸದಸ್ಯರ ಸಂಸದೀಯ ಸ್ಥಾಯಿ ಸಮಿತಿಯೂ ರೈತರ ಪರವಾಗಿ ವರದಿ ನೀಡಿ ಎಂಎಸ್‌ಪಿ ಖಾತರಿ ಕಾನೂನು ಜಾರಿಗೆ ಬೆಂಬಲ ಸೂಚಿಸಿದೆ. ಆದರೂ ಕೇಂದ್ರ ಸರ್ಕಾರ ಇನ್ನೂ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಎಂಎಸ್‌ಪಿ ಖಾತರಿ ಕಾನೂನು ಇಲ್ಲದಿರುವುದರಿಂದ ದೇಶದ ರೈತರಿಗೆ ವರ್ಷಕ್ಕೆ ಸುಮಾರು 15 ಲಕ್ಷ ಕೋಟಿ ರೂ. ನಷ್ಟವಾಗುತ್ತಿದೆ ಎಂದು ಅವರು ಆರೋಪಿಸಿದರು.

ರೈತರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಫೆಬ್ರವರಿ 7ರಿಂದ ಕನ್ಯಾಕುಮಾರಿಯಿಂದ ರೈತ ಜಾಗೃತಿ ಯಾತ್ರೆ ಆರಂಭವಾಗಲಿದೆ. ಈ ಯಾತ್ರೆ ಕೇರಳ, ಪುದುಚೇರಿ, ತಮಿಳುನಾಡು ಮೂಲಕ ಕರ್ನಾಟಕ ಪ್ರವೇಶಿಸಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದೆ. ಮಾರ್ಗ ಮಧ್ಯೆ ಗ್ರಾಮಾಂತರ ಪ್ರದೇಶಗಳಲ್ಲಿ ರೈತರಿಂದ ಸಹಿ ಸಂಗ್ರಹಿಸಲಾಗುವುದು. ಸುಮಾರು 40 ದಿನಗಳ ಕಾಲ ನಡೆಯುವ ಈ ಯಾತ್ರೆ ಕಾಶ್ಮೀರ ತಲುಪಲಿದೆ ಎಂದು ವಿವರಿಸಿದರು.

ಮಾ.19ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ದೇಶವ್ಯಾಪಿ ರೈತ ಮಹಾಸಭೆ ನಡೆಯಲಿದ್ದು, ಸಂಗ್ರಹಿಸಿದ ಸಹಿಗಳ ಮನವಿ ಪತ್ರವನ್ನು ಪ್ರಧಾನಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.

ಯಾತ್ರೆಯು ಫೆ.10ರಂದು ಚಾಮರಾಜನಗರ, 11ರಂದು ಮೈಸೂರು–ಮಂಡ್ಯ–ರಾಮನಗರ ಹಾಗೂ 12ರಂದು ಬೆಂಗಳೂರು–ಚಿಕ್ಕಬಳ್ಳಾಪುರ ಮಾರ್ಗವಾಗಿ ಆಂಧ್ರ ಪ್ರದೇಶಕ್ಕೆ ತೆರಳಲಿದೆ. ರಾಜ್ಯದ ಎಲ್ಲಾ ರೈತ ಸಂಘಟನೆಗಳ ಮುಖಂಡರು ಸ್ವಯಂಪ್ರೇರಿತವಾಗಿ ಬೆಂಬಲ ನೀಡಿ ತಮ್ಮ ತಮ್ಮ ಭಾಗದ ರೈತರಿಂದ ಸಹಿ ಸಂಗ್ರಹಿಸಿ ಯಾತ್ರಾ ಮುಖಂಡರಿಗೆ ಒಪ್ಪಿಸಬೇಕು ಎಂದು ಅವರು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಸಂಚಾಲಕ ಶಿವಶರಣಪ್ಪ, ಯಲ್ಲಪ್ಪ ಮಲ್ಲಿಬಾವಿ, ಕೊಟ್ರೇಶ್ ಚೌದರಿ, ಬಸವರೆಡ್ಡಿ ಪಾಟೀಲ್, ಬಸವರಾಜ ದಳಪತಿ, ವೆಂಕಟರಾಮರೆಡ್ಡಿ, ಚಂದ್ರಶೇಖರ್ ಸಾಹುಕಾರ್, ದೇವೇಂದ್ರಪ್ಪ ಚಂದಲಾಪುರ, ಅಶೋಕ್ ಚೌದರಿ, ಚಾಂದ್ ಹುಸೇನ್, ಶ್ಯಾಮಪ್ಪ ಚಂಡಿಕೆರಿ, ಹನುಮಂತ ವೆಂಕಟಾಪುರ, ಕೊಟ್ರಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News