ಯಾದಗಿರಿ | ಮುಖ್ಯಮಂತ್ರಿ ಕಾರ್ಯಕ್ರಮ ಹಿನ್ನೆಲೆ : ತಿಂಥಣಿ ಸೇತುವೆ ಮೂಲಕ ಹಾದು ಹೋಗುವ ಸಾರ್ವಜನಿಕರ ಸಂಚಾರಕ್ಕೆ ಮಾರ್ಗ ಬದಲಾವಣೆಗೆ ಸೂಚನೆ
ಯಾದಗಿರಿ : ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ರಾಯಚೂರು ಜಿಲ್ಲೆಯ ತಿಂಥಣಿ ಬ್ರಿಡ್ಜ್ ಬಳಿ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಸಂಚಾರಕ್ಕೆ ತಾತ್ಕಾಲಿಕ ಮಾರ್ಗ ಬದಲಾವಣೆ ಮಾಡಿ ಯಾದಗಿರಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಆದೇಶ ಹೊರಡಿಸಿದ್ದಾರೆ.
2026ರ ಫೆಬ್ರವರಿ 1ರಂದು ಬೆಳಿಗ್ಗೆ 11 ರಿಂದ ಸಂಜೆ 4 ಗಂಟೆಯವರೆಗೆ ತಿಂಥಣಿ ಸೇತುವೆ ಮೂಲಕ ಸಂಚರಿಸುವ ಎಲ್ಲಾ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದ್ದು, ಅವುಗಳನ್ನು ಬದಲಿ ಮಾರ್ಗಗಳಿಂದ ಸಂಚರಿಸಲು ಸೂಚಿಸಲಾಗಿದೆ.
ಬದಲಿ ಸಂಚಾರ ಮಾರ್ಗಗಳು :
ತಿಂಥಣಿ ಬ್ರಿಡ್ಜ್ ಮೂಲಕ ಸಂಚರಿಸುವ ವಾಹನಗಳನ್ನು ದೇವಾಪೂರ ಕ್ರಾಸ್ – ಹುಣಸಗಿ – ಕೋಡೆಕಲ್ – ನಾರಾಯಣಪೂರ – ಲಿಂಗಸುಗೂರ ಮಾರ್ಗವಾಗಿ ಸಂಚರಿಸಲು ಸೂಚಿಸಲಾಗಿದೆ.
ಲಿಂಗಸುಗೂರ ಕಡೆಯಿಂದ ಬರುವ ಸಾರ್ವಜನಿಕ ವಾಹನಗಳು ನಾರಾಯಣಪೂರ – ಕೋಡೆಕಲ್ – ಹುಣಸಗಿ – ದೇವಾಪೂರ ಕ್ರಾಸ್ ಮಾರ್ಗ ಬಳಸಬೇಕು. ಇದೇ ಅವಧಿಯಲ್ಲಿ ಶಾಂತಪೂರ ಕ್ರಾಸ್‌ನಿಂದ ತಿಂಥಣಿ ಬ್ರಿಡ್ಜ್ ವರೆಗೆ ರಸ್ತೆಯ ಎರಡು ಬದಿಗಳಲ್ಲಿಯೂ ಯಾವುದೇ ವಾಹನಗಳನ್ನು ನಿಲುಗಡೆ ಮಾಡದಂತೆ ತಾತ್ಕಾಲಿಕ ನಿಷೇಧ ವಿಧಿಸಲಾಗಿದೆ.
ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಮೋಟಾರು ವಾಹನ ನಿಯಮಗಳು–1989ರಡಿ ಪ್ರದತ್ತ ಅಧಿಕಾರವನ್ನು ಬಳಸಿಕೊಂಡು ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.