ಯಾದಗಿರಿ | ಸರಣಿ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಮೃತ್ಯು, ಮೂವರಿಗೆ ಗಾಯ
photo: PTI
ಯಾದಗಿರಿ : ಎಟಿಎಂಗೆ ಹಣ ತುಂಬಿಸಲು ತೆರಳುತ್ತಿದ್ದ ವಾಹನದಿಂದ ಸಂಭವಿಸಿದ ಸರಣಿ ಅಪಘಾತದಲ್ಲಿ ಓರ್ವ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಗೊಂಡ ಘಟನೆ ಯಾದಗಿರಿ ತಾಲೂಕಿನ ಮುಂಡರಗಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ವೇಗವಾಗಿ ಸಾಗುತ್ತಿದ್ದ ಎಟಿಎಂ ಹಣ ತುಂಬಿಸುವ ವಾಹನವು ಎರಡು ಬೈಕ್‌ಗಳಿಗೆ ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಢಿಕ್ಕಿಯ ತೀವ್ರತೆಗೆ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಮೃತರನ್ನು ಉತ್ತರ ಪ್ರದೇಶ ಮೂಲದ ಶಾಹದತ್ ಹುಸೇನ್ (28) ಎಂದು ಗುರುತಿಸಲಾಗಿದೆ. ಇದೇ ರಾಜ್ಯದ ಇನ್ನೂ ಮೂವರು ಬೈಕ್ ಸವಾರರು ಗಂಭೀರ ಗಾಯಗೊಂಡಿದ್ದು, ಅವರನ್ನು ಯಾದಗಿರಿ ಯಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗಾಯಾಳುಗಳು ಉತ್ತರ ಪ್ರದೇಶದಿಂದ ಬಟ್ಟೆ ವ್ಯಾಪಾರದ ಉದ್ದೇಶದಿಂದ ಯಾದಗಿರಿಗೆ ಬಂದಿದ್ದರು ಎಂದು ತಿಳಿದುಬಂದಿದೆ. ಅಪಘಾತದ ಸುದ್ದಿ ತಿಳಿದು ಯಾದಗಿರಿ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.