ಹಿಂದುಳಿದ ವರ್ಗಗಳ ಜನರನ್ನು ಒಂದು ಮಾಡುವುದೇ ವಾಯ್ಸ್ ಆಪ್ ಓಬಿಸಿ 100 ಗುರಿ : ಶಾಸಕ ಚೆನ್ನಾರೆಡ್ಡಿ ಪಾಟೀಲ್
ಯಾದಗಿರಿ : ಪ್ರಜಾಪ್ರಭುತ್ವವನ್ನು ರಕ್ಷಿಸಲು, ನ್ಯಾಯಸಮ್ಮತ ಪ್ರತಿನಿಧಿತ್ವವನ್ನು ಖಚಿತಪಡಿಸಲು ಮತ್ತು ಸಾಮಾಜಿಕ ನ್ಯಾಯವನ್ನು ಸಾಧಿಸಲು ಓಬಿಸಿ ಸಮುದಾಯಗಳನ್ನು ಒಗ್ಗೂಡಿಸುವುದೇ ವಾಯ್ಸ್ ಆಫ್ ಓಬಿಸಿ-100 ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಹೇಳಿದರು.
ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕ ಜಿಲ್ಲಾ ಸಮಿತಿಯಿಂದ ಆಯೋಜಿಸಲಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದುಳಿದ, ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರಿಗೆ ಶಕ್ತಿಯುತ ವೇದಿಕೆ ಸಿಗಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ ಎಂದು ಹೇಳಿದರು.
ಕಳೆದ ಜು.25 ರಂದು ದೆಹಲಿಯಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹಾಗೂ ಇತರೆ ನಾಯಕರ ಸಾನ್ನಿಧ್ಯದಲ್ಲಿ ಈ ಕಲ್ಪನೆಗೆ ಚಾಲನೆ ಸಿಕ್ಕಿದ್ದು, ಮೊದಲ ಹಂತದಲ್ಲಿ ಸಮಾವೇಶಗಳ ಮೂಲಕ ಸಂಘಟನೆ ಬಲಪಡಿಸಿ ಮುಂದಿನ ದಿನಗಳಲ್ಲಿ ತಾಲೂಕು, ಹಳ್ಳಿ ಮಟ್ಟಕ್ಕೂ ವಿಸ್ತರಿಸಬೇಕೆಂಬುದು ನಾಯಕತ್ವದ ಆಶಯವೆಂದು ಶಾಸಕರು ಹೇಳಿದರು.
ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ್ ಮಾತನಾಡಿ, ಹಿಂದುಳಿದ ವರ್ಗಗಳು ಒಗ್ಗಟ್ಟಿನಿಂದ ಹೋರಾಡಿದಾಗ ಮಾತ್ರ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಶರಣಪ್ಪ ಸಲಾದಪುರ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಶರಣಪ್ಪ ಮಾನೆಗಾರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರೆಡ್ಡಿ ಅನಪುರ ಅವರು ಹಾಜರಿದ್ದರು.
ಜಿಲ್ಲಾ ಕಾಂಗ್ರೆಸ್ ಓಬಿಸಿ ಘಟಕದ ಅಧ್ಯಕ್ಷ ಸಾಯಿಬಣ್ಣ ಕೆಂಗೂರಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬುರಾವ ಕಾರ್ಡೂರ್, ಕೆಪಿಸಿಸಿ ಪ್ರಚಾರ ಸಮಿತಿ ಉಪಾಧ್ಯಕ್ಷ ಡಾ. ಭೀಮಣ್ಣಾ ಮೇಟಿ, ಶಿಕ್ಷಕರ ಘಟಕದ ರಾಜ್ಯ ಉಪಾಧ್ಯಕ್ಷ ಆಶಪ್ಪ ಗಾಜರಕೋಟ್, ಹಿರಿಯ ಮುಖಂಡ ವೆಂಕೋಬ ಯಾದವ್, ವಿಶ್ವನಾಥ ನಿಲಹಳ್ಳಿ ಸೇರಿದಂತೆ ಅನೇಕರು ಭಾಗವಹಿಸಿದರು.
ತಾಯಪ್ಪ ಯಾದವ್ ಸ್ವಾಗತಿಸಿದರು. ಜಿಲ್ಲಾ ಕಾಂಗ್ರೆಸ್ ವಕ್ತಾರ ಸಾಮಸನ್ಸ್ ಮಾಳಿಕೇರಿ ನಿರೂಪಿಸಿದರು.