ಯಾದಗಿರಿ | ರಾಷ್ಟ್ರಧ್ವಜ ಸಂಹಿತೆ ಪಾಲನೆ ಪ್ರತಿಯೊಬ್ಬರ ಕರ್ತವ್ಯ: ಸೈಯದ್ ಕಮರುದ್ದಿನ್
ಶಾಲಾ ಮಕ್ಕಳಿಗೆ ರಾಷ್ಟ್ರಧ್ವಜ ಕಟ್ಟುವ ಮಾಹಿತಿ ಕಾರ್ಯಾಗಾರ
ಯಾದಗಿರಿ: ರಾಷ್ಟ್ರಧ್ವಜವು ನಮ್ಮ ದೇಶದ ಗೌರವ, ಸ್ವಾಭಿಮಾನ ಹಾಗೂ ಏಕತೆಯ ಸಂಕೇತವಾಗಿದ್ದು, ಪ್ರತಿಯೊಬ್ಬ ನಾಗರಿಕನು ರಾಷ್ಟ್ರಧ್ವಜ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಭಾರತ ಸೇವಾದಳದ ಜಿಲ್ಲಾ ಸಂಘಟಿಕ ಸೈಯದ್ ಕಮರುದ್ದಿನ್ ಹೇಳಿದರು.
ಜಿಲ್ಲೆಯ ಎಲೇರಿ ಗ್ರಾಮದ ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ಶಾಲೆಯಲ್ಲಿ ಭಾರತ ಸೇವಾದಳ ಸಪ್ತಾಹದ ಅಂಗವಾಗಿ ಶಾಲಾ ಮಕ್ಕಳಿಗೆ ಆಯೋಜಿಸಿದ್ದ ರಾಷ್ಟ್ರಧ್ವಜ ಕಟ್ಟುವ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ನಾ.ಸು. ಹರ್ಡೀಕರ್ ಅವರಿಂದ ಸ್ಥಾಪಿಸಲ್ಪಟ್ಟ ಹಿಂದೂಸ್ತಾನ್ ಸೇವಾದಳವು ಸ್ವಾತಂತ್ರ್ಯ ನಂತರ ರಾಜಕೀಯರಹಿತ ಸಂಘಟನೆಯಾಗಿ ಭಾರತ ಸೇವಾದಳವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಶಾಲಾ ಮಕ್ಕಳಲ್ಲಿ ರಾಷ್ಟ್ರಭಕ್ತಿ ಮತ್ತು ನಾಗರಿಕ ಜವಾಬ್ದಾರಿಯನ್ನು ಬೆಳೆಸುವ ನಿಟ್ಟಿನಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಹೇಳಿದರು.
ಕಾರ್ಯಾಗಾರದಲ್ಲಿ ವಿದ್ಯಾರ್ಥಿನಿಯರಿಗೆ ರಾಷ್ಟ್ರಧ್ವಜದ ಇತಿಹಾಸ, ಅದರ ಗೌರವ, ಧ್ವಜ ಸಂಹಿತೆ, ರಾಷ್ಟ್ರಧ್ವಜವನ್ನು ಸರಿಯಾಗಿ ಕಟ್ಟುವ ವಿಧಾನ ಹಾಗೂ ಸಂರಕ್ಷಿಸುವ ಬಗ್ಗೆ ಪ್ರಾಯೋಗಿಕವಾಗಿ ವಿವರಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಲಕ್ಷ್ಮಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.