ಯಾದಗಿರಿ | ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಎಐಡಿವೈಓ ವತಿಯಿಂದ ಸಹಿ ಸಂಗ್ರಹ ಅಭಿಯಾನ
ಯಾದಗಿರಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಲಕ್ಷಾಂತರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಆಗ್ರಹಿಸಿ, ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಶನ್ (AIDYO) ಅಖಿಲ ಭಾರತ ಸಮಿತಿಯ ಕರೆ ಮೇರೆಗೆ ಯಾದಗಿರಿ ನಗರದಲ್ಲಿ ಬೃಹತ್ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.
ನಗರದ ಸರ್ಕಾರಿ ಗ್ರಂಥಾಲಯ ಸೇರಿದಂತೆ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ನಡೆದ ಈ ಅಭಿಯಾನದಲ್ಲಿ ನೂರಾರು ಯುವಜನರು ಮತ್ತು ಉದ್ಯೋಗಾಕಾಂಕ್ಷಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಸಹಿ ನೀಡುವ ಮೂಲಕ ಬೆಂಬಲ ಸೂಚಿಸಿದರು.
ಕೇಂದ್ರ ಸರ್ಕಾರದ 78 ಇಲಾಖೆಗಳಲ್ಲಿ ಖಾಲಿ ಇರುವ 9.79 ಲಕ್ಷ ಹುದ್ದೆಗಳು ಹಾಗೂ ರಾಜ್ಯದ 43 ಇಲಾಖೆಗಳಲ್ಲಿ ಬಾಕಿ ಇರುವ 2.85 ಲಕ್ಷ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು ಎಂದು ಸಂಘಟನೆ ಒತ್ತಾಯಿಸಿದರು.
ಎಲ್ಲಾ ನೇಮಕಾತಿಗಳ ವಯೋಮಿತಿಯನ್ನು ಕನಿಷ್ಠ ಐದು ವರ್ಷ ವಿಸ್ತರಿಸಬೇಕು, ನೇಮಕಾತಿ ಪ್ರಕ್ರಿಯೆ ಸಂಪೂರ್ಣವಾಗಿ ಪಾರದರ್ಶಕವಾಗಿರಬೇಕು, ಎಲ್ಲ ರೀತಿಯ ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟಬೇಕು, ನೇಮಕಾತಿ ಅರ್ಜಿ ಶುಲ್ಕವನ್ನು ಸಂಪೂರ್ಣವಾಗಿ ಕೈಬಿಡಬೇಕು ಹಾಗೂ ಪರೀಕ್ಷಾರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಲಾಯಿತು. ಖಾಲಿ ಇರುವ ಚಿತ್ರಕಲಾ, ಸಂಗೀತ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕೆಂದು ಮನವಿ ಮಾಡಲಾಯಿತು.
ಅಭಿಯಾನವನ್ನುದ್ದೇಶಿಸಿ ಮಾತನಾಡಿದ ಎಐಡಿವೈಓ ರಾಜ್ಯ ಉಪಾಧ್ಯಕ್ಷ ಚನ್ನಬಸವ ಜಾನೇಕಲ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯುವಜನರನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿವೆ. ವಯೋಮಿತಿ ಮೀರುತ್ತಿರುವುದರಿಂದ ಉದ್ಯೋಗಾಕಾಂಕ್ಷಿಗಳು ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆಯಂತಹ ಹಾದಿ ತುಳಿಯುತ್ತಿದ್ದಾರೆ. ಸರ್ಕಾರಗಳು ಉದ್ಯೋಗ ನೀಡುವ ಬದಲು ಮಾದಕ ವ್ಯಸನ ಹಾಗೂ ಜೂಜಾಟಗಳನ್ನು ಪ್ರೋತ್ಸಾಹಿಸುವ ನೀತಿ ಅನುಸರಿಸುತ್ತಿವೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದ ಮೇಲೆ ಕಡಿಮೆ ವೇತನಕ್ಕೆ ಯುವಜನರನ್ನು ದುಡಿಸಿಕೊಳ್ಳುತ್ತಿರುವುದು ಶೋಷಣೆಯಾಗಿದೆ. ಇತ್ತೀಚೆಗೆ ಧಾರವಾಡದಲ್ಲಿ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದ ಉದ್ಯೋಗಾಕಾಂಕ್ಷಿಗಳ ಮೇಲೆ ನಡೆಸಿದ ಲಾಠಿ ಪ್ರಹಾರವು ಖಂಡನೀಯ ಎಂದು ಅವರು ಹೇಳಿದರು.
ಅಭಿಯಾನದಲ್ಲಿ ಸಂಘಟನೆಯ ಸದಸ್ಯರಾದ ಬಸವರಾಜ, ಆನಂದ, ಮಂಜುನಾಥ, ಹನುಮಂತ, ಮಮತಾ, ಈಶಮ್ಮ, ಈಶಪ್ಪ, ಮೌನೇಶ, ನಾಗರಾಜ್, ವೆಂಕಟೇಶ್ ಕೆ ಸೇರಿದಂತೆ ನೂರಾರು ಯುವಜನರು ಪಾಲ್ಗೊಂಡಿದ್ದರು.