×
Ad

ಯಾದಗಿರಿ | ನೀಲಹಳ್ಳಿಯಲ್ಲಿ ಶಿಥಿಲಗೊಂಡ ನೀರಿನ ಟ್ಯಾಂಕ್; ಜೀವ ಕೈಯಲ್ಲಿ ಹಿಡಿದು ಓಡಾಡುವ ಸ್ಥಿತಿ : ಉಮೇಶ ಮುದ್ನಾಳ

Update: 2026-01-09 22:20 IST

ಯಾದಗಿರಿ: ತಾಲ್ಲೂಕಿನ ಸೈದಾಪುರ ಸಮೀಪದ ನೀಲಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಪಕ್ಕದಲ್ಲೇ ಇರುವ ಶಿಥಿಲಗೊಂಡ ನೀರಿನ ಟ್ಯಾಂಕ್ ಯಾವುದೇ ಕ್ಷಣದಲ್ಲಿ ಕುಸಿಯುವ ಹಂತದಲ್ಲಿದ್ದು, ಇದನ್ನು ಕೂಡಲೇ ನೆಲಸಮಗೊಳಿಸಬೇಕು ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ಆಗ್ರಹಿಸಿದ್ದಾರೆ.

ಗ್ರಾಮಕ್ಕೆ ಭೇಟಿ ನೀಡಿದ ಅವರು, ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕ (RO Plant) ಹಾಗೂ ಪಾಚಿಗಟ್ಟಿ ಬೀಳುವ ಹಂತದಲ್ಲಿರುವ ಟ್ಯಾಂಕನ್ನು ವೀಕ್ಷಿಸಿದರು. ಬಳಿಕ ಗ್ರಾಮಸ್ಥರೊಂದಿಗೆ ದಿಢೀರ್ ಪ್ರತಿಭಟನೆ ನಡೆಸಿದ ಅವರು, ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಯಾದಗಿರಿ-ಸೈದಾಪುರ ಮುಖ್ಯ ರಸ್ತೆ ಬಂದ್ ಮಾಡಿ ಜಿಲ್ಲಾಡಳಿತದ ವಿರುದ್ಧ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುಮಾರು 5,000 ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ವರ್ಷಗಳ ಹಿಂದೆ ನಿರ್ಮಿಸಲಾದ ನೀರಿನ ಟ್ಯಾಂಕ್ ಸಂಪೂರ್ಣ ಶಿಥಿಲಗೊಂಡಿದೆ. ಸಿಮೆಂಟ್ ಕಿತ್ತು ಹೋಗಿದ್ದು, ಕಬ್ಬಿಣದ ರಾಡುಗಳು ಹೊರಬಂದಿವೆ. ಟ್ಯಾಂಕ್ ಪಕ್ಕದಲ್ಲೇ ಶಾಲೆಯಿದ್ದು, ಮಕ್ಕಳು ಹಾಗೂ ಸಾರ್ವಜನಿಕರು ಭಯದಲ್ಲೇ ಓಡಾಡುವಂತಾಗಿದೆ. ಅಲ್ಲದೆ, ಜೆಸ್ಕಾಂ ವಿದ್ಯುತ್ ತಂತಿಗಳು ಟ್ಯಾಂಕ್ ಮೇಲ್ಭಾಗದಲ್ಲೇ ಹಾದು ಹೋಗಿದ್ದು, ಟ್ಯಾಂಕ್ ಕುಸಿದರೆ ಭಾರಿ ಅನಾಹುತ ಸಂಭವಿಸುವ ಸಾಧ್ಯತೆಯಿದೆ ಎಂದು ಅವರು ಆರೋಪಿಸಿದರು.

ಕಳೆದ 4 ವರ್ಷಗಳಿಂದ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಯಿಲ್ಲದೆ ಕೆಟ್ಟು ನಿಂತಿದೆ. ಗ್ರಾಮದ ಚರಂಡಿಗಳು ತುಂಬಿ ಹೋಗಿದ್ದು, ಸೊಳ್ಳೆಗಳ ಕಾಟದಿಂದ ರೋಗರುಜಿನಗಳು ಹರಡುತ್ತಿವೆ. ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ. ಕೂಡಲೇ ನೂತನ ಟ್ಯಾಂಕ್ ನಿರ್ಮಾಣ ಮಾಡಬೇಕು ಮತ್ತು ಚರಂಡಿಗಳಿಗೆ ಬ್ಲೀಚಿಂಗ್ ಪೌಡರ್ ಸಿಂಪಡಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಶಂಕರ, ನರಸಪ್ಪ, ಸಿದ್ರಾಮ, ಪವನ, ಹಣಮಂತ, ಮಲ್ಲಪ್ಪ, ಬಾಲಪ್ಪ, ಶೇಖಪ್ಪ, ಮಲ್ಲೇಶಿ, ರಾಜಪ್ಪ, ನಾಗೇಶ, ಸೈದಪ್ಪ, ರಮೇಶ, ರಾಚಪ್ಪ, ನಾಗಪ್ಪ ಬನ್ನಪ್ಪ, ಉಸೇನಪ್ಪ, ಸಾಬರೆಡ್ಡಿ ಭೀಮಪ್ಪ. ಲಕ್ಷ್ಮೀ,  ಇಂದ್ರಮ್ಮ, ಸೋಲೊಚನಮ್ಮ, ಪದ್ಮಾವತಿ, ಮಲ್ಲಮ್ಮ, ಕಮಲಮ್ಮ, ಶ್ರೀದೇವಿ, ಸಂಗೀತಾ, ನಾಗಮ್ಮ, ತಾರಮ್ಮ, ಸುಶಿಲಮ್ಮ ಸೇರಿದಂತೆ ಅನೇಕರು ಭಾಗವಹಿಸಿದ್ದರು.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News