ಯಾದಗಿರಿ | ಅನಧಿಕೃತ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕತ್ತೆಗಳ ಮೆರವಣಿಗೆ ಮಾಡಿ ಆಕ್ರೋಶ
ಯಾದಗಿರಿ: ಅಕ್ರಮ ಅನಧಿಕೃತ ಶಾಲೆಗಳು ವಸತಿ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಂಗಳವಾರ ನಗರದ ನೇತಾಜಿ ಸುಭಾಶ್ಚಂದ್ರ ಬೋಸ್ ವೃತ್ತದಿಂದ ಡಿಡಿಪಿಐ ಕಚೇರಿವರೆಗೆ ವಿನೂತನವಾಗಿ ಕತ್ತೆಗಳ ಮೆರವಣಿಗೆ ಮಾಡಿದ ನಮ್ಮ ಕರ್ನಾಟಕ ಸೇನೆ ಕಾರ್ಯಕರ್ತರು ಇಲಾಖೆ ವಿಳಂಬ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ವಿಶ್ವಾರಾಧ್ಯ ದಿಮ್ಮೆ ನೇತೃತ್ವದಲ್ಲಿ ವಿನೂತನ ಮೆರವಣಿಗೆ ಮಾಡಿದ ಕಾರ್ಯಕರ್ತರು, ಡಿಡಿಪಿಐ ಕಚೇರಿಗೆ ಕತ್ತೆಗಳೊಂದಿಗೆ ತೆರಳಿ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಪ್ರಧಾನ ಸಂಚಾಲಕ ಭೀಮಣ್ಣ ಶಖಾಪುರ ಅವರು, ಈಗಾಗಲೇ ಹಲವು ಮನವಿ ಆಗ್ರಹ ಒತ್ತಾಯ ನಂತರ ಶಹಾಪೂರದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರೂ ಯಾವುದೇ ಕ್ರಮ ಕೈಗೊಳ್ಳದ ಶಿಕ್ಷಣ ಇಲಾಖೆ ವಿಳಂಬ ಕಾರ್ಯವಿಧಾನದ ವಿರುದ್ಧ ವಿನೂತನ ಕತ್ತೆಗಳ ಮೆರವಣಿಗೆ ಮಾಡಿ ಆಗ್ರಹಿಸಲಾಗುತ್ತಿದೆ ಎಂದು ಅವರು ಹೇಳಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಡಿಡಿಪಿಐ ಜ.2 ರ ನಂತರ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಭೀಮು ಪೂಜಾರಿ, ಅಬ್ದುಲ್ ಸಾಹುಕಾರ, ಅಬ್ದುಲ್ ಅಜೀಜ್, ಚೆನ್ನಬಸವ ಕನಕ, ಮಲ್ಲಿಕಾರ್ಜುನ ಸಾಂಗ್ಲಿಯಾನಾ, ಮಹೇಶ, ನರೇಂದ್ರ ಸೂರ್ಯವಂಶಿ, ಶರಣಪ್ಪ ಕುಂಬಾರ, ಸಿದ್ದು ಪಟ್ಟೇದಾರ, ಮಲ್ಲು ಕಲ್ಮನಿ, ಭೀಮಣ್ಣಗೌಡ, ನಿತೇಶ್ ಕುರಕುಂದಿ, ಅವಿನಾಶ ಇಟೆಕರ್, ಶ್ರೀದೇವಿ ಕಟ್ಟಿಮನಿ, ನಾಗರಡ್ಡಿ ಗೌಡ, ಅಂಬ್ರೇಷ್, ರಾಜು ಗುಂಡಗುರ್ತಿ, ಶರಣು ದೇವರಮನಿ, ಗುರು ಅಂಗಡಿ, ವಿಶ್ವಜಿತ್ ಕಟ್ಟಿ, ಮಹೇಬೂಬ, ರಮೇಶ, ಮೈಬುಬ್ ಮೋಟ್ನಳ್ಳಿ, ಅರ್ಜುನ ರಾಠೋಡ, ರಡ್ಡೆಪ್ಪ ಬಡ್ಡಿ, ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.
ಜಿಲ್ಲೆಯಲ್ಲಿ ಅನಧಿಕೃತ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನವೆಂಬರ್ ತಿಂಗಳಲ್ಲಿ ಬಿಇಓ ಕಚೇರಿ ಎದುರು ಧರಣಿ ನಡೆಸಲಾಗಿತ್ತು. ಆಗ ಲಿಖಿತ ರೂಪದಲ್ಲಿ ಭರವಸೆ ನೀಡಿದ ಅಧಿಕಾರಿಗಳು ಇದುವರೆಗೆ ಕ್ರಮ ಕೈಗೊಂಡಿಲ್ಲ. ಈಗಲೂ ನಿರ್ಲಕ್ಷ್ಯ ಮುಂದುವೆರೆಸಿದರೆ ಇಲಾಖೆಗೆ ಮಸಿ ಬಳೆಯುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗುತ್ತದೆ.
-ವಿಶ್ವಾರಾಧ್ಯ ದಿಮ್ಮೆ, ಜಿಲ್ಲಾಧ್ಯಕ್ಷರು