ಯಾದಗಿರಿ | ಲುಂಬಿನಿ ಗಾರ್ಡನ್‌ನಲ್ಲಿ ದೆವ್ವದ ವದಂತಿ !
ಸತ್ಯಾಸತ್ಯತೆ ಬಯಲಿಗೆಳೆಯಲು ಜ.18ರಂದು ವೈಜ್ಞಾನಿಕ ಪರಿಷತ್ತಿನಿಂದ ಜಾಗೃತಿ ಅಭಿಯಾನ
ಯಾದಗಿರಿ: ನಗರದ ಪ್ರಮುಖ ಮನರಂಜನಾ ತಾಣವಾದ 'ಲುಂಬಿನಿ ಗಾರ್ಡನ್'ನಲ್ಲಿ ದೆವ್ವವಿದೆ ಎಂಬ ವದಂತಿಯೊಂದು ಸಾರ್ವಜನಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಜನರಲ್ಲಿರುವ ಮೂಢನಂಬಿಕೆ ಮತ್ತು ಭಯವನ್ನು ಹೋಗಲಾಡಿಸಲು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಸತ್ಯಶೋಧನೆ ಹಾಗೂ ಜಾಗೃತಿ ಅಭಿಯಾನಕ್ಕೆ ಸಜ್ಜಾಗಿದೆ.
ವದಂತಿಯ ಹಿನ್ನೆಲೆ :
ಕಳೆದ ಕೆಲವು ದಿನಗಳಿಂದ ಲುಂಬಿನಿ ಗಾರ್ಡನ್‌ನಲ್ಲಿ ವಿಚಿತ್ರ ಶಬ್ದಗಳು ಕೇಳಿ ಬರುತ್ತಿವೆ ಮತ್ತು ಅಲ್ಲಿ ದೆವ್ವ ಇದೆ ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಿಂದಾಗಿ ಆತಂಕಗೊಂಡ ನಗರದ ಜನಸಾಮಾನ್ಯರು ಹಾಗೂ ಮಕ್ಕಳು ಉದ್ಯಾನವನಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ವೈಜ್ಞಾನಿಕ ಜಾಗೃತಿ ಅಭಿಯಾನ :
ಈ ವದಂತಿಯ ಹಿಂದಿನ ಸತ್ಯಾಸತ್ಯತೆಯನ್ನು ಬಯಲಿಗೆಳೆಯಲು ಪರಿಷತ್ತು ನಿರ್ಧರಿಸಿದೆ. ನಾಳೆ (ಭಾನುವಾರ) ಮಧ್ಯಾಹ್ನ 12 ಗಂಟೆಗೆ ಲುಂಬಿನಿ ಗಾರ್ಡನ್ ಆವರಣದಲ್ಲಿ "ಲುಂಬಿನಿ ಗಾರ್ಡನ್‌ನಲ್ಲಿ ದೆವ್ವ ಇದೆಯಾ? - ಒಂದು ವೈಜ್ಞಾನಿಕ ಜಾಗೃತಿ ಅಭಿಯಾನ" ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
"ನಗರದ ಪ್ರಜ್ಞಾವಂತ ನಾಗರಿಕರು ಮತ್ತು ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಈ ಅಭಿಯಾನದಲ್ಲಿ ಭಾಗವಹಿಸಬೇಕು. ಯಾವುದೇ ಆಧಾರರಹಿತ ವಿಡಿಯೋಗಳಿಗೆ ಮರುಳಾಗಬಾರದು. ಸತ್ಯವನ್ನು ಅರಿಯುವ ಮೂಲಕ ಭಯ ಮುಕ್ತರಾಗಬೇಕು," ಎಂದು ಪರಿಷತ್ತು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.