ಯಾದಗಿರಿ | ಮನುಷ್ಯರಿಗೆ ಸೂಕ್ಷ್ಮ ಜ್ಞಾನ, ಸಾಮಾಜಿಕ ವಿನಯ ಅಗತ್ಯ : ಗೊ.ರು.ಚನ್ನಬಸಪ್ಪ
ಯಾದಗಿರಿ : ಮನುಷ್ಯನಿಗೆ ಒಳ್ಳೆಯದನ್ನು ಗುರುತಿಸುವ ಸೂಕ್ಷ್ಮ ಜ್ಞಾನ, ಒಳ್ಳೆಯದನ್ನು ಸಾಧಿಸುವ ಛಲ, ಲೋಕ ವ್ಯವಹಾರದಲ್ಲಿ ಪಾಕ್ವತೆ ಹಾಗೂ ಸಾಮಾಜಿಕ ವಿನಯ ಅವಶ್ಯಕವಾಗಿವೆ ಎಂದು ವಿದ್ವಾಂಸ ಗೊ.ರು. ಚನ್ನಬಸಪ್ಪ ಹೇಳಿದರು.
ನಗರದ ಪಾಟೀಲ ಕನ್ವೆನ್ಷನ್ ಹಾಲ್‌ನಲ್ಲಿ ಬುಧವಾರ ಸಿದ್ದಪ್ಪ ಎಸ್ ಹೊಟ್ಟಿ ಅಭಿನಂದನಾ ಸಮಿತಿ ಆಯೋಜಿಸಿದ್ದ ಅಭಿನಂದನಾ ಹಾಗೂ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜನಿಸಿದ ದಿನವಷ್ಟೇ ಅಲ್ಲ, ನಾವು ಏಕೆ ಜನಿಸಿದ್ದೇವೆ ಎಂಬುದನ್ನು ಸ್ಮರಣೆಯಲ್ಲಿ ಇಟ್ಟುಕೊಂಡು ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಸಾರ್ವಜನಿಕ ಕ್ಷೇತ್ರದಲ್ಲಿ ಕೆಲಸ ಮಾಡಿದಾಗ ಸಮಸ್ಯೆಗಳು, ಸವಾಲುಗಳು, ನಷ್ಟ–ಕಷ್ಟಗಳು, ದೂರು–ಆರೋಪಗಳು ಬರುವುದು ಸಹಜ. ಅವುಗಳಿಗೆ ಹೆದರಿ ಸುಮ್ಮನೆ ಕುಳಿತುಕೊಳ್ಳದೆ, ನಮ್ಮಿಂದ ಸಾಧ್ಯವಾದ ಕ್ಷೇತ್ರದಲ್ಲಿ ಸಾಧಿಸಿ ತೋರಿಸಬೇಕು ಎಂದು ಸಲಹೆ ನೀಡಿದರು.
ಒಬ್ಬ ವ್ಯಕ್ತಿಗೆ ಘನತೆ ಮತ್ತು ಗೌರವ ಬರುವುದು ಅವನ ಬಳಿ ಇರುವ ಅಧಿಕಾರದಿಂದಲ್ಲ, ಸಮಾಜಕ್ಕೆ ಸಲ್ಲಿಸಿದ ಸೇವೆಯಿಂದ. ಅಧಿಕಾರ ಹಾಗೂ ಸ್ಥಾನಮಾನಗಳ ಅಹಂಕಾರ ಮನಸ್ಸನ್ನು ವಿಕೃತಗೊಳಿಸುತ್ತದೆ ಎಂಬ ಅರಿವು ಇರಬೇಕು ಎಂದು ಹೇಳಿದರು.
ಭಾಲ್ಕಿಯ ಗುರುಬಸವ ಪಟ್ಟದ್ದೇವರು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಸೋಮಶೇಖರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಿದ್ದಪ್ಪ ಎಸ್.ಹೊಟ್ಟಿ ದಂಪತಿಗೆ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ‘ದಣಿವರಿಯದ ಧೀಮಂತ’ ಅಭಿನಂದನಾ ಗ್ರಂಥ, ‘ಧೀಮಂತ ಚೇತನಿ’ ಗ್ರಂಥ, ಧ್ವನಿಸುರಳಿ ಹಾಗೂ ದಿನದರ್ಶಿಕೆ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಅಬ್ಬೆ ತುಮಕೂರಿನ ವಿಶ್ವಾರಾಧ್ಯ ಮಠದ ಪೀಠಾಧಿಪತಿ ಗಂಗಾಧರ ಶಿವಾಚಾರ್ಯರು, ಖಾಸಾ ಮಠದ ಶಾಂತವೀರ ಗುರುಮುರಘರಾಜೇಂದ್ರ ಸ್ವಾಮೀಜಿ, ಹೆಡಗಿಮದ್ರಾದ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರು, ನಟ ದೊಡ್ಡಣ್ಣ, ಬಸವ ಸಮಿತಿ ಉಪಾಧ್ಯಕ್ಷ ಹಣಮಂತರೆಡ್ಡಿ ಮುದ್ನಾಳ, ನಫೆಡ್ ಉಪಾಧ್ಯಕ್ಷ ತರಲೋಕ್ ಸಿಂಗ್, ನಿರ್ದೇಶಕ ಅಶೋಕ ರಾಠೋಡ, ಮುಖಂಡರಾದ ವಿಶ್ವನಾಥರೆಡ್ಡಿ ದರ್ಶನಾಪುರ, ಶಿವಾನಂದ ಮಾನಕರ್, ಸುರೇಶ್ ಆರ್. ಸಜ್ಜನ್, ಲಿಂಗಾರೆಡ್ಡಿ ಬಾಸರೆಡ್ಡಿ, ಸುಭಾಷಚಂದ್ರ ಕೌಲಗಿ, ಮಹೇಶ್ ರೆಡ್ಡಿ ಮುದ್ನಾಳ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.