ಯಾದಗಿರಿ | ಮಲ್ಲಿಕಾರ್ಜುನ ನಿಂಗಪ್ಪಗೆ ʼಕನ್ನಡ ರಾಜ್ಯೋತ್ಸವ ಪ್ರಶಸ್ತಿʼ
ಮಲ್ಲಿಕಾರ್ಜುನ ನಿಂಗಪ್ಪ
ಯಾದಗಿರಿ: ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಡಮಾಡುವ 2025-26ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದ್ದು, ಮಲ್ಲಿಕಾರ್ಜುನ ನಿಂಗಪ್ಪ ಅವರು "ಪರಿಸರ" ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಜಿಲ್ಲೆಯ ರಾಮಸಮುದ್ರ ಗ್ರಾಮದ ಮೂಲದ ಮಲ್ಲಿಕಾರ್ಜುನ ನಿಂಗಪ್ಪ ಅವರು ಪರಿಸರ ಸಂರಕ್ಷಣೆಯ ದೀರ್ಘ ಹಾದಿಯಲ್ಲಿ ಅಚ್ಚಳಿಯದ ಗುರುತು ಮೂಡಿಸಿದ್ದಾರೆ.
1963ರಲ್ಲಿ ಜನಿಸಿದ ಇವರು ಬಾಲ್ಯದಿಂದಲೇ ಪ್ರಕೃತಿಪ್ರೇಮಿಯಾಗಿ ಬೆಳೆಯುತ್ತಾ, ಕಳೆದ 45 ವರ್ಷಗಳಿಂದ ಹಸಿರು ಸಂರಕ್ಷಣೆಯ ಕಾರ್ಯದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ.
ಸುಮಾರು 100 ಎಕರೆ ಪ್ರದೇಶದಲ್ಲಿ ಐದು ಲಕ್ಷಕ್ಕೂ ಅಧಿಕ ಸಸಿಗಳನ್ನು ನೆಟ್ಟು, ಅವುಗಳ ಪಾಲನೆ–ಪೋಷಣೆ ಮಾಡಿ ದಟ್ಟ ಅರಣ್ಯ ಪ್ರದೇಶವನ್ನೇ ನಿರ್ಮಿಸಿದ್ದಾರೆ. ಪ್ರಕೃತಿಯೊಡನೆ ಬದುಕುವ ಜೀವನಶೈಲಿಯಿಂದ ಸಮಾಜದಲ್ಲಿ ಪರಿಸರ ಜಾಗೃತಿಯ ಹಾದಿ ತೋರಿದ ಇವರು, ತಮ್ಮ ಶ್ರಮಕ್ಕೆ ಗೌರವವಾಗಿ ‘ವನಶ್ರೀ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.