ಯಾದಗಿರಿ | ಮಧ್ಯಾಹ್ನದ ಬಿಸಿ ಊಟದಲ್ಲಿ ಹಲ್ಲಿ ಪತ್ತೆ
ಯಾದಗಿರಿ : ಜಿಲ್ಲೆಯ ಸುರಪುರ ನಗರದ ವಡ್ಡರ ಓಣಿಯಲ್ಲಿ ಇರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿ ಊಟದಲ್ಲಿ ಹಲ್ಲಿ ಪತ್ತೆಯಾದ ಘಟನೆ ನಡೆದಿದೆ.
ಊಟ ಮಾಡುತ್ತಿದ್ದ ವೇಳೆ ಹಲ್ಲಿ ಕಾಣಿಸಿಕೊಂಡಿದ್ದರಿಂದ ಮಕ್ಕಳು ಆತಂಕಗೊಂಡಿದ್ದಾರೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆ ಮಕ್ಕಳ ಪೋಷಕರು ಶಾಲೆಗೆ ಆಗಮಿಸಿ, ಶಿಕ್ಷಕರು ಹಾಗೂ ಅಡುಗೆ ಸಹಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಶಾಲೆಯಲ್ಲಿ ಒಟ್ಟು 42 ಮಕ್ಕಳಿದ್ದು, ಹಲ್ಲಿ ಪತ್ತೆಯಾಗುತ್ತಿದ್ದಂತೆ ಎಲ್ಲ ಮಕ್ಕಳನ್ನೂ ಮುನ್ನೆಚ್ಚರಿಕಾ ಕ್ರಮವಾಗಿ ಹಸನಾಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗಿದೆ. ಬಳಿಕ ಹೆಚ್ಚಿನ ಪರೀಕ್ಷೆಗಾಗಿ ಅವರನ್ನು ಸುರಪುರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಆಸ್ಪತ್ರೆಗೆ ಭೇಟಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ ಮಾತನಾಡಿ, ಒಂದು ಮಗುವಿಗೆ ಮಾತ್ರ ವಾಂತಿ ಕಾಣಿಸಿಕೊಂಡಿದ್ದು, ಉಳಿದ ಮಕ್ಕಳಿಗೆ ಯಾವುದೇ ತೊಂದರೆ ಕಂಡುಬಂದಿಲ್ಲ. ಎಲ್ಲ ಮಕ್ಕಳ ಆರೋಗ್ಯ ಸ್ಥಿತಿ ಸದ್ಯಕ್ಕೆ ಸ್ಥಿರವಾಗಿದೆ ಎಂದು ತಿಳಿಸಿದರು.
ಅಡುಗೆ ತಯಾರಿಸುವ ಸಂದರ್ಭದಲ್ಲಿ ಅಡುಗೆ ಸಹಾಯಕಿಯರ ನಿರ್ಲಕ್ಷವೇ ಈ ಘಟನೆಗೆ ಕಾರಣವಾಗಿರಬಹುದು ಎನ್ನಲಾಗುತ್ತಿದ್ದು, ನಿಖರ ಕಾರಣ ಇನ್ನೂ ತಿಳಿದು ಬರಬೇಕಿದೆ.