ಯಾದಗಿರಿ | ‘ಮನುಸ್ಮೃತಿ ದಹನ’ ದಿನಾಚರಣೆ
ಮನುಸ್ಮೃತಿ ದಹನವು ಅಂಬೇಡ್ಕರ್ ಅವರ ತಾತ್ಕಾಲಿಕ ನಿರ್ಧಾರವಲ್ಲ : ಡಾ.ಎಸ್.ಎಸ್.ನಾಯಕ
ಯಾದಗಿರಿ: ಮನುಸ್ಮೃತಿ ದಹನವು ತಾತ್ಕಾಲಿಕ ಅಥವಾ ಆಕಸ್ಮಿಕ ನಿರ್ಧಾರವಲ್ಲ. ಅದು ಉದ್ದೇಶಪೂರ್ವಕವಾಗಿ, ಬಹಳ ಎಚ್ಚರಿಕೆಯೊಂದಿಗೆ ತೆಗೆದುಕೊಂಡ ಕಠಿಣ ಹೆಜ್ಜೆಯಾಗಿತ್ತು ಎಂದು ಸರಕಾರಿ ಪದವಿ ಕಾಲೇಜು ಪ್ರಾಧ್ಯಾಪಕ ಡಾ. ಎಸ್. ಎಸ್. ನಾಯಕ ಹೇಳಿದರು..
ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 98ನೇ ವರ್ಷದ ಮನುಸ್ಮೃತಿ ದಹನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿಂದೂ ಸಮಾಜದಲ್ಲಿರುವ ಜಾತಿ ಆಧಾರಿತ ಅನ್ಯಾಯದ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶದಿಂದಲೇ ಈ ತೀವ್ರ ಹೋರಾಟದ ರೂಪವನ್ನು ಅಂಬೇಡ್ಕರ್ ಅವರು ಆಯ್ಕೆ ಮಾಡಿಕೊಂಡಿದ್ದರು. ‘ಬಾಗಿಲು ತಟ್ಟದಿದ್ದರೆ ಯಾವುದೂ ತೆರೆಯುವುದಿಲ್ಲ’ ಎಂಬ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾತುಗಳು ಇಂದು ಕೂಡ ನಮ್ಮ ಅರಿವಿಗೆ ದಾರಿದೀಪವಾಗಿವೆ ಎಂದು ಹೇಳಿದರು.
ಜಾತಿ ಹಾಗೂ ಲಿಂಗ ತಾರತಮ್ಯವನ್ನು ಪೋಷಿಸುವ ಅಲಿಖಿತ ಸಂವಿಧಾನವಾದ ಮನುಸ್ಮೃತಿಯನ್ನು ದಹನಗೊಳಿಸುವ ಮೂಲಕ ಬಾಬಾಸಾಹೇಬ್ ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತ್ವದ ಮೌಲ್ಯಗಳನ್ನು ಪ್ರತಿಪಾದಿಸಿದ್ದರು. ಇಂದು ನಾವು ನಮ್ಮೊಳಗೆ ಇನ್ನೂ ಉಳಿದಿರಬಹುದಾದ ಮನುಸ್ಮೃತಿಯ ಪಳೆಯುಳಿಕೆಗಳನ್ನು ಸಂಪೂರ್ಣವಾಗಿ ಸುಟ್ಟು ಹಾಕಬೇಕಿದೆ. ಆ ಅಲಿಖಿತ ಸಂವಿಧಾನ ನಾಶವಾಗದೆ ಬಾಬಾಸಾಹೇಬ್ ನೀಡಿರುವ ಲಿಖಿತ ಸಂವಿಧಾನದ ಸಂಪೂರ್ಣ ಅನುಷ್ಠಾನ ಸಾಧ್ಯವಿಲ್ಲ. ಪ್ರತಿಯೊಬ್ಬ ಪ್ರಜೆಗೂ ಸಂವಿಧಾನವೇ ಧರ್ಮಗ್ರಂಥವಾಗಬೇಕು ಎಂದು ಅವರು ಹೇಳಿದರು.
ದಲಿತ ಸಂಘರ್ಷ ಸಮಿತಿ ಯಾದಗಿರಿ ಜಿಲ್ಲಾ ಸಂಚಾಲಕ ಮರೆಪ್ಪ ಚಟ್ಟೇರಕರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗೋಪಾಲ ತೆಳಗೇರಿ, ಭೀಮರಾಯ ಲಿಂಗೇರಿ, ಭೀಮರಾಯ ಠಾಣಗುಂದಿ, ಸೈದಪ್ಪ ಕೂಯಿಲೂರ, ಭೀಮರಾಯ ಹೊಸ್ಮನಿ, ಬಾಸುಮೀಯಾ ವಡಿಗೇರಾ, ಚಂದ್ರಕಾಂತ ಗೀರೆಪ್ಪನೋರ್, ನಿಂಗಪ್ಪ ಕೊಲ್ಲೂರಕರ್, ಪರಶುರಾಮ ಒಡೆಯರ್, ಗೌತಮ ಕ್ರಾಂತಿ, ಮಲ್ಲಿಕಾರ್ಜುನ ಹತ್ತಿಕುಣಿ, ಸಂಪತ್ ಚಿನ್ನಾಕರ್, ವಸಂತ ಸುಂಗಲಕರ್, ಹಣಮಂತ ಮೀಲ್ಟ್ರೀ ಸೇರಿದಂತೆ ಅನೇಕ ದಲಿತ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.