ಯಾದಗಿರಿ | ಇಬ್ರಾಹಿಂಪುರದಲ್ಲಿ ಸಾಯಿಬಾಬಾ ಜಾತ್ರಾ ಮಹೋತ್ಸವಕ್ಕೆ ಚಾಲನೆ : ಹಸೆಮಣೆ ಏರಿದ ಹತ್ತು ಜೋಡಿಗಳು
ಯಾದಗಿರಿ: ಶಹಾಪುರ ತಾಲೂಕಿನ ಇಬ್ರಾಹಿಂಪುರ ಗ್ರಾಮದಲ್ಲಿನ ಶ್ರೀ ಶಿರಡಿ ಸಾಯಿಬಾಬಾ ಮಂದಿರದ 4ನೇ ಜಾತ್ರಾ ಮಹೋತ್ಸವವು ನಾಡಿನ ಹರಗುರು ಚರಮೂರ್ತಿಗಳು, ಸಾಹಿತಿಗಳು, ಗಣ್ಯರು, ಕಲಾವಿದರು ಹಾಗೂ ಅಪಾರ ಸಂಖ್ಯೆಯ ಸಾಯಿಬಾಬಾ ಭಕ್ತರ ಸಮ್ಮುಖದಲ್ಲಿ ಶನಿವಾರ ನೆರವೇರಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಾಸಕ ಗುರು ಪಾಟೀಲ್, ಸರ್ವಧರ್ಮಗಳ ಸಕಾರ ಮೂರ್ತಿಯಾದ ಸಾಯಿಬಾಬಾ ಅವರ ಜಾತ್ರೆಯನ್ನು ಆಚರಿಸುವ ಮೂಲಕ ಜಾತ್ಯತೀತ ತತ್ವಗಳನ್ನು ಜೀವಂತವಾಗಿಟ್ಟಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿ, ದಿಗ್ಗಿ ಮಹಾರಾಜ್ ಅವರ ಸಾಮಾಜಿಕ ಕಳಕಳಿ ಎಲ್ಲರಿಗೂ ಪ್ರೇರಣೆಯಾಗಬೇಕು. ಸಾಮೂಹಿಕ ವಿವಾಹದಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸರಳತೆ ಹಾಗೂ ಸಮಾಜಮುಖಿ ಚಿಂತನೆ ಮೆರೆದಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಮಾತನಾಡಿ, ಭಗವಂತ ಎಲ್ಲವನ್ನೂ ನೀಡುತ್ತಾನೆ. ಆದರೆ ಇಂತಹ ಸಮಾಜೋಪಯೋಗಿ ಕಾರ್ಯಕ್ರಮಗಳನ್ನು ಮಾಡುವವರು ವಿರಳ. ಈ ನಿಟ್ಟಿನಲ್ಲಿ ದಿಗ್ಗಿ ಮಹಾರಾಜ್ ಅವರ ಸೇವೆ ಅನನ್ಯವಾಗಿದೆ ಎಂದರು.
ಗುರುಮಠಕಲ್ ಖಾಸಾಮಠದ ಶಾಂತವೀರ ಗುರುಮುರುಘರಾಜೇಂದ್ರ ಹಾಗೂ ಕಡಕೋಳದ ರುದ್ರಮುನಿ ಸ್ವಾಮಿಗಳು ಮಾತನಾಡಿದರು.
ಬೆಳಿಗ್ಗೆ ಸಾಯಿಬಾಬಾ ಮೂರ್ತಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ಮಂಗಳಾರತಿ ಕಾರ್ಯಕ್ರಮಗಳು ಆಶ್ರಮದ ರೂವಾರಿಗಳಾದ ದಿಗ್ಗಿ ಮಹಾರಾಜ್, ಸಿದ್ದಪಾಜಿ ದಿಗ್ಗಿ ಹಾಗೂ ಕುಟುಂಬಸ್ಥರಿಂದ ನೆರವೇರಿದವು. ನಂತರ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸುಮಾರು ಹತ್ತು ಜೋಡಿಗಳ ಸಾಮೂಹಿಕ ವಿವಾಹ ಜರುಗಿತು.
ಡಿ.ಜಾನ್ ಸಂಸ್ಥೆಯ ಶಾಲಾ ಮಕ್ಕಳಿಂದ ಭರತನಾಟ್ಯ ಪ್ರದರ್ಶನ, ಬಸವಣ್ಣನವರ ವಚನ ಗಾಯನ ನಡೆಯಿತು. ಲಿಂಗೈಕ್ಯರಾದ ಕಾಗಿನೆಲೆ ಸಿದ್ದರಾಮನಂದಪೂರಿ ಶ್ರೀಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ವಿವಿಧ ಮಠಗಳ ಪೀಠಾಧಿಪತಿಗಳು, ಸಾಹಿತಿಗಳು ಹಾಗೂ ಗಣ್ಯರಾದ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜಪ್ಪ ವಿಭೂಯುಹಳ್ಳಿ, ಮಾಜಿ ಅಧ್ಯಕ್ಷ ಅಮೀನ್ ರೆಡ್ಡಿ ಯಾಳಗಿ, ಸಾಹಿತಿ ಡಾ.ಸಿದ್ದರಾಮ ಹೊನ್ಕಲ್, ಶಾಂತರೆಡ್ಡಿ ದೇಸಾಯಿ, ಆರ್. ಮಹಾದೇವಪ್ಪ ಗೌಡ ಅಬ್ಬೆತುಮಕೂರು, ಡಾ. ರವೀಂದ್ರನಾಥ ಹೊಸಮನಿ, ರಾಯಪ್ಪ ಗೌಡ ಹುಡೆದ್, ಪತ್ರಕರ್ತ ಪ್ರಕಾಶ ದೊರೆ, ನೀಲಕಂಠ ಬಡಿಗೇರ, ಉಮೇಶ ಮುದ್ನಾಳ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಶ್ರೀಶೈಲ್ ಪೂಜಾರಿ ಸ್ವಾಗತಿಸಿದರು. ಮಹಾಂತೇಶ ಹೂಲಕೊಟಿ ಹಾಗೂ ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಜ.18ರಂದು ಸಂಜೆ 6 ಗಂಟೆಗೆ ಧಾರ್ಮಿಕ ಸಭೆ, ಸಂಗೀತ ಹಾಗೂ ನೃತ್ಯ ಗಾಯನ ಕಾರ್ಯಕ್ರಮಗಳು ನಡೆಯಲಿದ್ದು, ಡಾಲಿ ಧನಂಜಯ ಸೇರಿದಂತೆ ಇತರ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.