ಯಾದಗಿರಿ | ರಸ್ತೆ ಸುರಕ್ಷತಾ ನಿಯಮ ಪಾಲನೆ ಮಾಡುವ ಮೂಲಕ ಅಮೂಲ್ಯ ಜೀವ ಉಳಿಸಿಕೊಳ್ಳಿ : ನ್ಯಾ.ಮರಿಯಪ್ಪ
37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಜಾಗೃತಿ ಮಾಸಾಚರಣೆ
ಯಾದಗಿರಿ : ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ವಾಹನಗಳನ್ನು ಚಲಾಯಿಸಿ ತಮ್ಮ ಅಮೂಲ್ಯವಾದ ಜೀವವನ್ನು ಉಳಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರೂ ಆಗಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಮರಿಯಪ್ಪ ಅವರು ಹೇಳಿದರು.
ನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಗುರುವಾರ ಸಾರಿಗೆ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಜಾಗೃತಿ ಮಾಸಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಅತಿ ವೇಗದ ಚಾಲನೆ, ನಿರ್ಲಕ್ಷ್ಯದ ಚಾಲನೆ, ಮೊಬೈಲ್ ಬಳಕೆ ಮಾಡಿಕೊಂಡು ವಾಹನ ಚಾಲನೆ, ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುವುದು ಹೆಚ್ಚುತ್ತಿರುವುದರಿಂದಲೇ ಹೆಚ್ಚಿನ ರಸ್ತೆ ಅಪಘಾತಗಳು ಸಂಭವಿಸುತ್ತಿವೆ ಎಂದು ಹೇಳಿದರು.
ವಾಹನ ಸವಾರರು ಸದಾ ಒಂದೇ ಮಾತು ನೆನಪಿಟ್ಟುಕೊಳ್ಳಬೇಕು. ನಮಗೂ ಕುಟುಂಬವಿದೆ. ತಂದೆ, ತಾಯಿ, ಪತ್ನಿ, ಮಕ್ಕಳು ನಮ್ಮ ಸುರಕ್ಷಿತ ವಾಪಸಿಗಾಗಿ ಕಾಯುತ್ತಿರುತ್ತಾರೆ. ನೀವು ಕುಟುಂಬದ ಆಧಾರಸ್ತಂಭವಾಗಿರುತ್ತೀರಿ. ಅಡ್ಡಾದಿಡ್ಡಿ ಚಾಲನೆಯಿಂದ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡರೆ ಕುಟುಂಬ ಅನಾಥವಾಗುತ್ತದೆ ಎಂದು ಹೇಳಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಮಿಲೀಂದ ಕುಮಾರ ಎಸ್.ಎಸ್. ಮಾತನಾಡಿ, ಸಂಚಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಕುರಿತು ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಾರ್ವಜನಿಕರ ಸಹಕಾರವಿಲ್ಲದೆ ಅಪಘಾತ ತಡೆ ಸಾಧ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ, ಎನ್‌ಎಚ್‌ಐ, ಪೊಲೀಸ್ ಇಲಾಖೆ ಅಧಿಕಾರಿಗಳು, ಆಟೋರಿಕ್ಷಾ ಸಂಘದ ಪದಾಧಿಕಾರಿಗಳು, ಸಾರಿಗೆ ಇಲಾಖೆ ಅಧಿಕಾರಿ ಮೌನೇಶ, ಆನಂದ, ಸಿಬ್ಬಂದಿಗಳಾದ ಶಿವಕುಮಾರ ನವಲೆ, ಅವಿನಾಶ್, ಆನಂದ, ಡ್ರೈವಿಂಗ್ ಸ್ಕೂಲ್ ಅಧ್ಯಕ್ಷ ಯಲ್ಲಪ್ಪ ದೊಡ್ಮನಿ, ಜುಬೇರ್ ಅಹ್ಮದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.