×
Ad

ಯಾದಗಿರಿ | ಲುಂಬಿನಿ ಉದ್ಯಾನವನದಲ್ಲಿ ವೈಜ್ಞಾನಿಕ ಜಾಗೃತಿ ಅಭಿಯಾನ

Update: 2026-01-18 20:37 IST

ಯಾದಗಿರಿ : ಧಾರ್ಮಿಕ ವ್ಯಕ್ತಿಗಳು ಸುಳ್ಳು ಹೇಳುವುದಿಲ್ಲ ಎಂಬ ನಂಬಿಕೆ ಮುಗ್ಧ ಜನರಲ್ಲಿದೆ. ಆದ್ದರಿಂದ ಸ್ವಾಮೀಜಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಬದಲಾದರೆ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ ಎಂದು ಗುರುಮಠಕಲ್ ಖಾಸಮಠದ ಶಾಂತವೀರ ಗುರುಮುರುಘಾ ರಾಜೇಂದ್ರ ಮಹಾಸ್ವಾಮೀಜಿ ಹೇಳಿದರು.

ನಗರದ ಲುಂಬಿನಿ ಉದ್ಯಾನವನದಲ್ಲಿ ದೆವ್ವವಿದೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಹಮ್ಮಿಕೊಂಡಿದ್ದ ವೈಜ್ಞಾನಿಕ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.

ಕಳೆದ 17 ದಿನಗಳಿಂದ ಲುಂಬಿನಿ ಉದ್ಯಾನವನದಲ್ಲಿ ಭಯಾನಕ ಶಬ್ದ ಕೇಳಿಬರುತ್ತಿದೆ ಮತ್ತು ದೆವ್ವವಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಈ ಕುರಿತು ಮಾತನಾಡಿದ ಶ್ರೀಗಳು, ಯಾರೋ ಕಿಡಿಗೇಡಿಗಳು ಸುಳ್ಳು ವಿಡಿಯೋ ಸೃಷ್ಟಿಸಿ ಪ್ರವಾಸಿಗರಲ್ಲಿ ಭಯ ಹುಟ್ಟಿಸುತ್ತಿದ್ದಾರೆ. ಸುಂದರವಾದ ಉದ್ಯಾನವನಕ್ಕೆ ಬರುವ ಜನರನ್ನು ತಡೆಯಲು ಇಂತಹ ಕೃತ್ಯ ಎಸಗಲಾಗುತ್ತಿದೆ. ಜನರು ಇಂತಹ ಮೂಢನಂಬಿಕೆಗಳಿಗೆ ಮರಳಾಗಬಾರದು ಎಂದು ತಿಳಿಸಿದರು.

ಪ್ರಗತಿಪರ ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿ, ದೆವ್ವ-ದೇವರು ಎಂಬುದು ಮನುಷ್ಯನ ಭ್ರಮೆ ಮಾತ್ರ. ಇತ್ತೀಚೆಗೆ ನಡೆದ ವೈಜ್ಞಾನಿಕ ಸಮ್ಮೇಳನದಿಂದ ವಿಚಲಿತರಾದ ಪಟ್ಟಭದ್ರ ಹಿತಾಸಕ್ತಿಗಳು ಜನರನ್ನು ಮತ್ತೆ ಮೌಢ್ಯಕ್ಕೆ ತಳ್ಳಲು ದೆವ್ವದ ವದಂತಿ ಹಬ್ಬಿಸಿದ್ದಾರೆ. ಭಯ ಬಿಟ್ಟು ಎಂದಿನಂತೆ ಗಾರ್ಡನ್‌ಗೆ ಬನ್ನಿ ಎಂದು ಕರೆ ನೀಡಿದರು.

ವಿಜ್ಞಾನ ಶಿಕ್ಷಕಿ ಮಧು ಸಿಂಘೆ ಮಾತನಾಡಿ, ದೆವ್ವ ಎಂಬುದು ಮನುಷ್ಯನ ಮನಸ್ಸಿನ ಭಯದಿಂದ ಸೃಷ್ಟಿಯಾಗುವ ಚಿತ್ರಣವಷ್ಟೇ. ಮನಸ್ಸಿನ ಭಯ ನಿವಾರಣೆಯಾದರೆ ಇಂತಹ ಕಾಲ್ಪನಿಕ ದೆವ್ವಗಳು ಮರೆಯಾಗುತ್ತವೆ ಎಂದು ವೈಜ್ಞಾನಿಕವಾಗಿ ವಿವರಿಸಿದರು.

ಪರಿಷತ್ತಿನ ಜಿಲ್ಲಾಧ್ಯಕ್ಷ ಗುಂಡಪ್ಪ ಕಲಬುರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ದಲಿತ ಸಂಘಟನೆ ಹಿರಿಯ ಮುಖಂಡರಾದ ಮರೆಪ್ಪ ಚಟ್ಟರಕರ್, ಫಾಧರ ಮಿಧನ್, ವಿಶ್ವನಾಥರೆಡ್ಡಿ ಗೊಂದಡಗಿ, ಜಗದೀಶ ನೂಲಿನವ‌ರ್, ಸೈದಪ್ಪ ಕೊಯಿಲೂರ, ಭೀಮಣ್ಣ ಹೊಸಮನಿ, ಲಕ್ಷ್ಮಣ ರಾಠೋಡ್ ಸೇರಿದಂತೆಯೇ ಇತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News