ಯಾದಗಿರಿ | ನಕಲಿ ಎಸ್‌ಟಿ ಜಾತಿ ಪ್ರಮಾಣಪತ್ರಕ್ಕೆ ಕಡಿವಾಣ ಹಾಕದಿದ್ದರೆ ರಾಜ್ಯದ್ಯಂತ ಹೋರಾಟ : ವಾಲ್ಮೀಕಿ ನಾಯಕ ಸಮಾಜ ಎಚ್ಚರಿಕೆ
ಯಾದಗಿರಿ/ಶಹಾಪುರ: ಹಿಂದುಳಿದ ವರ್ಗಕ್ಕೆ ಸೇರಿದ ಕೋಲಿ, ಕಬ್ಬಲಿಗ, ಬೆಸ್ತ ಸಮುದಾಯದವರಿಗೆ ಯಾವುದೇ ಕಾರಣಕ್ಕೂ ಪರಿಶಿಷ್ಟ ಪಂಗಡ (ಎಸ್‌ಟಿ) ಜಾತಿ ಪ್ರಮಾಣಪತ್ರ ನೀಡಬಾರದು. ಈ ವರ್ಗದವರು ರಾಜಕೀಯ ಪ್ರಭಾವ ಬಳಸಿ ತಳವಾರ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಎಸ್‌ಟಿ ಮೀಸಲಾತಿಯ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ವಾಲ್ಮೀಕಿ ನಾಯಕರ ಸಂಘದ ಜಿಲ್ಲಾಧ್ಯಕ್ಷ ಗೌಡ ಆಲ್ಬಾಳ ಹಾಗೂ ಉತ್ತರ ಕರ್ನಾಟಕ ಭಾಗದ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಮಾರಪ್ಪ ನಾಯಕ ಮಗದಂಪುರ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪರಿಶಿಷ್ಟ ಪಂಗಡ ಪಟ್ಟಿಯಲ್ಲಿ ಇರುವ ನಾಯಕ, ವಾಲ್ಮೀಕಿ, ಬೇಡ ಸಮುದಾಯಗಳಲ್ಲಿನ ತಳವಾರ ಮತ್ತು ಪರಿವಾರ ಜಾತಿಗಳನ್ನು ಎಸ್‌ಟಿ ಪಟ್ಟಿಗೆ ಸೇರಿಸಲಾಗಿದೆ. ಆದರೆ ಹಿಂದುಳಿದ ವರ್ಗಕ್ಕೆ ಸೇರಿದ ತಳವಾರ ಸಮುದಾಯವನ್ನೇ ಎಸ್‌ಟಿ ಪಟ್ಟಿಗೆ ಸೇರಿಸಲಾಗಿದೆ ಎಂದು ಕೆಲವು ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯರು ಹಾಗೂ ರಾಜಕೀಯ ಮುಖಂಡರು ಸುಳ್ಳು ಹೇಳಿ ತಮ್ಮ ಸಮುದಾಯದ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕೋಲಿ–ಕಬ್ಬಲಿಗ ಸಮಾಜದ ತಳವಾರ ಹಾಗೂ ಪರಿವಾರ ಜಾತಿಗಳನ್ನು ಎಸ್‌ಟಿ ಪಟ್ಟಿಗೆ ಸೇರಿಸಿರುವುದಾಗಿ ಯಾವುದೇ ಪರಿಷ್ಕೃತ ಸರ್ಕಾರಿ ಆದೇಶವಿಲ್ಲ. ಅಂತಹ ಆದೇಶಗಳಿದ್ದರೆ ಬಹಿರಂಗವಾಗಿ ಪ್ರಕಟಿಸಬೇಕು. ಸರ್ಕಾರದ ಆದೇಶಗಳನ್ನು ತಿರುಚಿ ಸುಳ್ಳು ಮಾಹಿತಿ ಹರಡುವುದನ್ನು ತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು.
ರಾಜ್ಯದಲ್ಲಿ ಸುಮಾರು 2.50 ಲಕ್ಷ ನಕಲಿ ಎಸ್‌ಟಿ ಜಾತಿ ಪ್ರಮಾಣಪತ್ರಗಳು ಸೃಷ್ಟಿಯಾಗಿದ್ದು, ಅವುಗಳ ಆಧಾರದ ಮೇಲೆ ಉದ್ಯೋಗ, ಮುಂಬಡ್ತಿ ಸೇರಿದಂತೆ ಅನೇಕ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲಾಗುತ್ತಿದೆ. ಈ ಕುರಿತು ದಾಖಲೆ ಸಮೇತ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಹಿಂದ ಸಮಾಜದ ಜಿಲ್ಲಾಧ್ಯಕ್ಷ ಹನುಮೇಗೌಡ ಮರ್ಕಲ್, ತಾಲೂಕು ಅಧ್ಯಕ್ಷ ಮರಪ್ಪ ಪ್ಯಾಟಿ ಶಿರವಾಳ, ನಕಲಿ ಎಸ್‌ಟಿ ಜಾತಿ ಪ್ರಮಾಣಪತ್ರ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಶ್ರವಣಕುಮಾರ ನಾಯಕ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಲಿಂಗಪ್ಪ ನಾಯಕ, ತಾಲೂಕು ಕಾರ್ಯದರ್ಶಿ ಹನುಮಂತ ದೊರೆ, ಯುವ ಜಿಲ್ಲಾಧ್ಯಕ್ಷ ದೇವು, ಘಟಕದ ಮುಖಂಡರಾದ ಗಂಗನಾಳ, ಶರಣಪ್ಪ ಜಾಕನಳ್ಳಿ, ತಿರುಪತಿ ಯಕ್ಕಿಂತಿ, ರಾಘವೇಂದ್ರ ಯಕ್ಕಿಂತಿ ಹಳಿಸಗರ, ಅಶೋಕ ಗಾಂಜಿ, ಮಲ್ಲಪ್ಪ ಹಳಹಳ್ಳಿ, ಅಶೋಕ ಟಣಕೇದಾರ, ಸುಭಾಷ ರಾಂಪುರ, ರಮೇಶ್ ಗುರಿಕಾರ, ಅಂಬರೀಷ ಇಟಗಿ, ಗೋಪಾಲ ದೊರಿ, ಬಲಭೀಮ ನಾಯಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಎಸ್‌ಟಿ ಮೀಸಲಾತಿ ಕೋಟಾದಲ್ಲಿ ಗೆದ್ದ ಶಾಸಕರು–ಸಚಿವರ ಮನೆ ಮುಂದೆ ಧರಣಿ :
ಎಸ್‌ಟಿ ಮೀಸಲಾತಿ ಕೋಟಾದಿಂದ ಚುನಾವಣೆ ಗೆದ್ದು ಶಾಸಕರು ಹಾಗೂ ಸಚಿವರಾಗಿರುವವರು ಈ ವಿಚಾರವನ್ನು ಅಧಿವೇಶನದಲ್ಲಿ ಪ್ರಬಲವಾಗಿ ಮುಂದಿಡದೆ ಸರ್ಕಾರದ ಮೇಲೆ ಒತ್ತಡ ತರುವಲ್ಲಿ ವಿಫಲರಾಗಿದ್ದಾರೆ. ಇಂತಹ ಶಾಸಕರು ಮತ್ತು ಸಚಿವರ ಮನೆ ಮುಂದೆ ಧರಣಿ ನಡೆಸಲಾಗುವುದು. ನಮ್ಮ ಸಮುದಾಯಕ್ಕೆ ನ್ಯಾಯ ಸಿಗದಿದ್ದರೆ ಅರೆಬೆತ್ತಲೆ ಪ್ರತಿಭಟನೆ ಹಾಗೂ ತಲೆ ಬೋಳಿಸಿಕೊಂಡು ಉಗ್ರ ಹೋರಾಟ ನಡೆಸಲಾಗುವುದು. ಮುಂದಿನ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಲಾಗುವುದು. ಇದು ಕೆಲವರ ನಿರ್ಧಾರವಲ್ಲ. ಇದು ರಾಜ್ಯದ ವಾಲ್ಮೀಕಿ ಸಮುದಾಯದ ಜನರ ತೀರ್ಮಾನವಾಗಿದೆ ಎಂದು ಅವರು ತಿಳಿಸಿದರು.
ಸರಿಯಾದ ದಾಖಲೆ ಪರಿಶೀಲನೆ ಇಲ್ಲದೆ ರಾಜಕೀಯ ಪ್ರಭಾವಕ್ಕೆ ಒಳಗಾಗಿ ನಕಲಿ ಎಸ್‌ಟಿ ಜಾತಿ ಪ್ರಮಾಣಪತ್ರ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯವ್ಯಾಪಿ ಉಗ್ರ ಹೋರಾಟ ಮಾಡಬೇಕಾಗುತ್ತದೆ.
- ಗೌಡಪ್ಪಗೌಡ ಅಲ್ವಾಳ, ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾಧ್ಯಕ್ಷ