ಯಾದಗಿರಿ | ವಿದ್ಯಾರ್ಥಿಗಳು ಸಾಮಾಜಿಕ ಜವಾಬ್ದಾರಿ ಅರಿತುಕೊಳ್ಳಬೇಕು : ನ್ಯಾ.ಮರಿಯಪ್ಪ
ಯಾದಗಿರಿ : ಸ್ನಾತಕ ಮತ್ತು ಸ್ನಾತಕೊತ್ತರ ತರಗತಿಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಸಕ್ತ ಸಂದರ್ಭಗಳಲ್ಲಿ ಸಾಮಾಜಿಕ ಜವಾಬ್ದಾರಿ ಅರಿತುಕೊಳ್ಳಬೇಕಾದ ಅಗತ್ಯವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮರಿಯಪ್ಪ ಹೇಳಿದರು.
ನಗರದ ಸರಕಾರಿ ಪದವಿ ಮಹಾವಿದ್ಯಾಲಯದ ಸಮಾಜ ವಿಭಾಗದ ಸ್ನಾತಕ ಮತ್ತು ಸ್ನಾತಕೊತ್ತರ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ವ್ಯವಸ್ಥೆಯಲ್ಲಿ ಮಕ್ಕಳು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗಿ ನಡೆಯುತ್ತಿದೆ. ಇದು ನಿಜವಾಗಿಯು ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿಯಾಗಿದೆ. ಕುಟುಂಬ ವ್ಯವಸ್ಥೆಯಲ್ಲಿ ಮಹಿಳೆಯ ಪಾತ್ರ ಪ್ರಮುಖವಾಗಿದೆ. ಎಲ್ಲ ಹಂತಗಳಲ್ಲಿಯೂ ಕೌಟುಂಬಿಕ ಸ್ವಾಸ್ಥ್ಯವನ್ನು ಕಾಪಾಡುವ ಮಹಿಳೆಯನ್ನು ಗೌರವದಿಂದ ಕಾಣಬೇಕು. ಆಗ ಮಕ್ಕಳು ಉತ್ತಮ ವಾತಾವರಣದಲ್ಲಿ ಬೆಳೆಯಲು ಸಹಾಯಕವಾಗತ್ತದೆ ಎಂದು ಅವರು ಹೇಳಿದರು.
ಬೆಂಗಳೂರು ಕಾಲೇಜು ಶಿಕ್ಷಣ ಇಲಾಖೆಯ ನೋಡಲ್ ಅಧಿಕಾರಿ ನೂತನಾ ಬಿ.ಡಿ. ಮಾತನಾಡಿ, ಅರ್ಹತೆ ಇರುವವರಿಗೆ ಅವಕಾಶಗಳು ಸಾಕಷ್ಟು ಪ್ರಾಪ್ತವಾಗುತ್ತವೆ. ಆ ಅವಕಾಶಗಳನ್ನು ಗಿಟ್ಟಿಸಿಕೊಳ್ಳಲು ಅತ್ಯಂತ ಶ್ರದ್ಧೆ ಮತ್ತು ನಿಷ್ಠೆಯಿಂದ ಅಧ್ಯಯನ ಮಾಡಿ, ಪ್ರಾಮಾಣಿಕವಾಗಿ ಪ್ರಯತ್ನಸಿದಾಗ ಖಂಡಿತವಾಗಿ ಯಶಶ್ಸು ಪಡಿಯಲು ಸಾಧ್ಯವಾಗುತ್ತದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಸುಭಾಶ್ಚಂದ್ರ ಕೌಲಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾಗ್ಯಜ್ಯೋತಿ ಎ.ಎನ್., ಲಿಂಗರಾಜ ಪಡಶೆಟ್ಟಿ, ಡಾ.ಸಿ.ಆರ್.ಕಂಬಾರ, ಡಾ.ಉಮೇಶ್ ತೇಜಪ್ಪ, ಸಾಬರೆಡ್ಡಿ ಬಂಗಾರಿ, ಬಿ.ಆರ್,ಕೇತನ್ಕರ್, ಡಾ.ಜಯದೇವಿ ಗಾಯಕ್ವಾಡ್, ಪ್ರಹ್ಲಾದ್ ಜ್ಯೋಷಿ, ಬಸನ್ಗೌಡ, ನಾಗಪ್ಪ ಮಾನೇದರ್, ಡಾ.ಗೌರೀಶ್ವರಯ್ಯ ಮತ್ತಿತರರು ಉಪಸ್ಥಿತರಿದ್ದರು.