×
Ad

ಯಾದಗಿರಿ | ವೆನೆಜುವೆಲಾ ಮೇಲೆ ಅಮೆರಿಕ ದಾಳಿ ಖಂಡಿಸಿ ಎಸ್‌ಯುಸಿಐ ಪ್ರತಿಭಟನೆ

Update: 2026-01-09 22:33 IST

ಯಾದಗಿರಿ : ಅಮೆರಿಕನ್ ಸಾಮ್ರಾಜ್ಯಶಾಹಿಗಳು ವೆನೆಜುವೆಲಾ ದೇಶದ ಮೇಲೆ ನಡೆಸಿರುವ ಮಿಲಿಟರಿ ದಾಳಿಯನ್ನು ಖಂಡಿಸಿ, ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಸಂಘಟನಾ ಸಮಿತಿಯು ಇಂದು ನಗರದ ಸುಭಾಷ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.

ಪಕ್ಷದ ಕೇಂದ್ರ ಸಮಿತಿಯು ಜ.6 ರಿಂದ 12 ರವರೆಗೆ ದೇಶಾದ್ಯಂತ ಪ್ರತಿಭಟನೆ ನಡೆಸಲು ಕರೆ ನೀಡಿದ ಹಿನ್ನೆಲೆಯಲ್ಲಿ ಈ ಹೋರಾಟ ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ರಾಜ್ಯ ವಿಸ್ತೃತ ಸಮಿತಿ ಸದಸ್ಯ ಕಾ.ಕೆ.ಸೋಮಶೇಖರ್ ಅವರು, ಈ ದಾಳಿಯು ಕೇವಲ ವೆನೆಜುವೆಲಾದ ಮೇಲಷ್ಟೇ ಅಲ್ಲ, ಇಡೀ ಲ್ಯಾಟಿನ್ ಅಮೆರಿಕದ ಸಾರ್ವಭೌಮತ್ವದ ಮೇಲೆ ನಡೆದ ದಾಳಿಯಾಗಿದೆ. ವಿಶ್ವದ ಅತಿ ಹೆಚ್ಚು ತೈಲ ನಿಕ್ಷೇಪ ಹೊಂದಿರುವ ವೆನೆಜುವೆಲಾ ಮೇಲೆ ತನ್ನ ಅಧಿಪತ್ಯ ಸ್ಥಾಪಿಸಲು ಅಮೆರಿಕ ಮಿಲಿಟರಿ ಬಲವನ್ನು ಬಳಸುತ್ತಿದೆ. ಸಂವಿಧಾನಿಕವಾಗಿ ಆಯ್ಕೆಯಾದ ನಾಯಕರನ್ನು ಕಡೆಗಣಿಸಿ, ತನ್ನ ಕೈಗೊಂಬೆ ಸರ್ಕಾರವನ್ನು ಸ್ಥಾಪಿಸಲು ಹೊರಟಿರುವುದು ಅಂತರಾಷ್ಟ್ರೀಯ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಗತ್ತಿನಾದ್ಯಂತ ಜನರು ಅಮೆರಿಕದ ಈ ಕ್ರೂರ ನಡೆಯನ್ನು ವಿರೋಧಿಸುತ್ತಿದ್ದಾರೆ. ಆದರೆ ಭಾರತ ಸರ್ಕಾರವು ಅಮೆರಿಕದ ವಿರುದ್ಧ ಕಠಿಣ ನಿಲುವು ತಳೆಯದೆ ಮೃದು ಧೋರಣೆ ಪ್ರದರ್ಶಿಸುತ್ತಿದೆ. ಇದು ಭಾರತದ ಸಾಮ್ರಾಜ್ಯಶಾಹಿ ವಿರೋಧಿ ಪರಂಪರೆಗೆ ವಿರುದ್ಧವಾದುದು ಎಂದು ಸೋಮಶೇಖರ್ ಟೀಕಿಸಿದರು.

ಜಿಲ್ಲಾ ಕಾರ್ಯದರ್ಶಿ ಕಾ.ಶರಣಗೌಡ ಗೂಗಲ್ ಮಾತನಾಡಿ, ಈ ಅಪರಾಧ ಸದೃಶ ದಾಳಿಯ ವಿರುದ್ಧ ಎಲ್ಲಾ ಯುದ್ಧ ವಿರೋಧಿ ಮತ್ತು ಶಾಂತಿಪ್ರಿಯ ಜನರು ಎದ್ದು ನಿಲ್ಲಬೇಕು. ಅಮೆರಿಕನ್ ಸಾಮ್ರಾಜ್ಯಶಾಹಿ ಶಕ್ತಿಗಳು ಲ್ಯಾಟಿನ್ ಅಮೆರಿಕದಿಂದ ತಕ್ಷಣ ಹಿಂದೆ ಸರಿಯುವಂತೆ ಒತ್ತಾಯಿಸಬೇಕು ಎಂದು ಕರೆ ನೀಡಿದರು.

ಪ್ರತಿಭಟನೆಯಲ್ಲಿ ಪಕ್ಷದ ಸದಸ್ಯರಾದ ಡಿ.ಉಮಾದೇವಿ, ಜಮಾಲ್ ಸಾಬ್, ಶಿಲ್ಪಾ ಬಿ.ಕೆ., ಸುಭಾಷ್ ಚಂದ್ರ ಬಾವನೋರ್, ಭೀಮರೆಡ್ಡಿ ಹಿರೇಬಾನರ್, ನಾಗರಾಜ ಹೇರೂರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News