×
Ad

ಯಾದಗಿರಿ | ಪೊಲೀಸ್ ಇಲಾಖೆಯ ನೆರಳಿನಲ್ಲಿ ಕೋಣ, ಕುರಿ ಬಲಿ : ದಲಿತ ಸಂಘರ್ಷ ಸಮಿತಿ ಆರೋಪ

Update: 2025-02-22 17:25 IST

ಸುರಪುರ : ತಾಲೂಕಿನ ಪರಸನಹಳ್ಳಿ ಗ್ರಾಮದಲ್ಲಿ ಫೆ.18ರಂದು ಸಾಯಂಕಾಲ 6 ಗಂಟೆಗೆ ಗ್ರಾಮ ದೇವತೆ ಜಾತ್ರೆಯಲ್ಲಿ ಸಾರ್ವಜನಿಕವಾಗಿ ಕೋಣ ಹಾಗೂ ಕುರಿಗಳ ಬಲಿ ನಡೆದಿದ್ದು, ಇಂತಹ ಘಟನೆ ನಡೆಯುವುದನ್ನು ತಡೆಯುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾ ಸಂಚಾಲಕ ಮಾಳಪ್ಪ ಕಿರದಳ್ಳಿ ಅವರು, ಈಗಾಗಲೇ ಕೆಲ ದಿನಗಳ ಹಿಂದೆ ಪೊಲೀಸ್ ವರಿಷ್ಠಾಧಿಕಾರಿಗಳು ತಮಗೂ ಹಾಗೂ ಸುರಪುರ ಪೊಲೀಸ್ ಉಪಾಧೀಕ್ಷಕರು, ಹುಣಸಗಿ ಸರ್ಕಲ್ ಇನ್ ಸ್ಪೆಕ್ಟರ್ ಗೆ ಹಾಗೂ ಕೆಂಭಾವಿ ಪಿ.ಎಸ್.ಐ ಅವರಿಗೂ ಮನವಿ ಸಲ್ಲಿಸಿ, ಪರಸನಹಳ್ಳಿ ಗ್ರಾಮದಲ್ಲಿ ಗ್ರಾಮ ದೇವತೆಯ ಹೆಸರಿನಲ್ಲಿ ನಡೆಯುವ ಕೋಣ, ಕುರಿಗಳ ಸಾರ್ವಜನಿಕ ಬಲಿಯನ್ನು ತಡೆಯುವಂತೆ ಮನವಿ ಮಾಡಿದ್ದರೂ ಸಹ ಪೋಲಿಸ್ ಇಲಾಖೆಯ ನೆರಳಿನಲ್ಲಿ ಈ ಕೋಣ, ಕುರಿಗಳ ಸಾರ್ವಜನಿಕ ಬಲಿ ನಡೆದಿದೆ ಎಂದು ಆರೋಪಿಸಿದರು.

ಫೆ.18 ರಂದು ಪರಸನಹಳ್ಳಿ ಗ್ರಾಮದಲ್ಲಿ ಕೋಣಗಳ ಬಲಿ ನಡೆಯುವಾಗ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳದಲ್ಲಿದ್ದರೂ ಅದನ್ನು ತಡೆಯದೆ ಇರುವುದು ನೋವಿನ ಸಂಗತಿಯಾಗಿದೆ.

ಈ ಘಟನೆ ನಡೆದಾಗ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಇನ್ನು ಮುಂದೆ ಜಿಲ್ಲೆಯಾದ್ಯಂತ ಎಲ್ಲಿಯೂ ಗ್ರಾಮ ದೇವತೆ, ಕೆಂಚಮ್ಮ, ಮರಗಮ್ಮ ಇವರ ಹೆಸರಲ್ಲಿ ಕೋಣ ಮತ್ತು ಕುರಿಗಳ ಬಲಿ ನಡೆಯುವುದನ್ನು ತಡೆಯಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿ ಆಗ್ರಹಿಸಿದರು

ಒಂದು ವೇಳೆ ಮತ್ತೆ ಇಂತಹ ಘಟನೆ ಮರುಕಳಿಸಿದರೆ ಕಲಬುರಗಿ ಈಶಾನ್ಯ ವಲಯ ಪೊಲೀಸ್ ಉಪ ನಿರ್ದೇಶಕರಿಗೆ ಹಾಗೂ ಗೃಹಮಂತ್ರಿಗಳಿಗೆ ನೇರವಾಗಿ ಜಿಲ್ಲೆಯ ಕಾನೂನು ಸುವ್ಯವಸ್ಥೆ ವಿಫಲತೆಯ ಕುರಿತು ದೂರು ನೀಡಲಾಗುವುದು ಹಾಗೂ ನಮ್ಮ ನಾಯಕ ರಾಜ್ಯ ಸಂಚಾಲಕರಾದ ಮಾವಳ್ಳಿ ಶಂಕರವರ ನೇತೃತ್ವದಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಗ್ರಾಮದಲ್ಲಿ ಕುರಿ ಕೋಣ ಬಲಿ ನೀಡಿದ ಆರೋಪಿಗಳ ಮೇಲೆ ಪ್ರಾಣಿ ಹತ್ಯೆ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಸಂಚಾಲಕ ರಾಮಣ್ಣ ಕಲ್ಲದೇವನಹಳ್ಳಿ, ವಿಭಾಗೀಯ ಸಂಚಾಲಕ ಮರಳಸಿದ್ದಪ್ಪ ನಾಯ್ಕಲ್, ಅಶೋಕ ನಾಯ್ಕಲ್ ಪರಶುರಾಮ ಮಹಲರೋಜ್, ಭೀಮರಾಯ ಬಳಿಚಕ್ರ, ಮರಿಲಿಂಗಪ್ಪ ಬದ್ದೆಪಲ್ಲಿ, ಭೀಮರಾಯ ಅಗ್ನಿ,ಲಕ್ಷ್ಮಣ ರಾಂಪೂರ, ಶರಣಪ್ಪ ತಳವಾರಗೇರಾ ಸೇರಿದಂತೆ ಅನೇಕರು ಇದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News